ಮಂಗಳೂರು: ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ನೆರವೇರಿತು. ಆದರೆ ತಾತ್ಕಾಲಿಕ ವೇಳಾಪಟ್ಟಿಯಂತೆ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗದೆ ಮುಂದುವರಿದಿದೆ.
ಬಳಿಕ ಸಂಜೆ ಸುಮಾರು 6 ಗಂಟೆಗೆ ಸಕಲೇಶಪುರ ತಲುಪಿದ ರೈಲು 6.14ಕ್ಕೆ ಅಲ್ಲಿಂದ ಮುಂದುವರಿಯಿತು. ಸಂಜೆ 6.49ಕ್ಕೆ ಹಾಸನ ತಲುಪಿ, 6.54ಕ್ಕೆ ಯಶವಂತಪುರದತ್ತ ಪ್ರಯಾಣ ಮುಂದುವರಿಸಿತು.
ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ಚಾಲನಾ ಸಮಯ, ತಾಂತ್ರಿಕ ಕಾರ್ಯಕ್ಷಮತೆ ಹಾಗೂ ಕಾರ್ಯಾಚರಣೆಯ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಪ್ರಾಯೋಗಿಕ ಸಂಚಾರದಲ್ಲಿ ಕಂಡುಬಂದ ಸಮಯ ಮತ್ತು ಮಾರ್ಗದ ನಿಲುಗಡೆಗಳನ್ನು ಕಾಯಂ ವೇಳಾಪಟ್ಟಿ ಎಂದು ಪರಿಗಣಿಸುವಂತಿಲ್ಲ ಎಂದು ರೈಲ್ವೆ ಮೂಲಗಳು ಸ್ಪಷ್ಟಪಡಿಸಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೊದಲ ಬಾರಿ ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ವರೆಗೆ ಸಂಚರಿಸಿತ್ತು.ವೇಳಾಪಟ್ಟಿಯಲ್ಲಿದ್ದರೂ ಕಬಕ-ಪುತ್ತೂರು ನೋ ಸ್ಟಾಪ್!
ವೇಳಾಪಟ್ಟಿ ಹೊರತೂ ಕಬಕ-ಪುತ್ತೂರಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗದೆ ಸಂಚರಿಸಲು ಕಾರಣ ಮಾತ್ರ ನಿಗೂಢವಾಗಿದೆ. ಪುತ್ತೂರಲ್ಲಿ ವಂದೇ ಭಾರತ್ ನಿಲುಗಡೆ ಆಗ್ರಹಿಸಿ ರೈಲ್ವೆ ಹೋರಾಟಗಾರರು, ಸಂಘಟನೆಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ರೈಲ್ವೆ ಸಚಿವರು ಹಾಗೂ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಶ್ರಮಿಸಿದ್ದರು. ಕೊನೆಗೂ ಎರಡನೇ ಬಾರಿ ವಂದೇ ಭಾರತ್ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯಲ್ಲಿ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿತ್ತು. ಆದರೆ ವೇಳಾಪಟ್ಟಿಯಲ್ಲಿ ಮಾತ್ರ ನಿಲುಗಡೆ ನೀಡಿ, ಸಂಚಾರ ವೇಳೆ ನಿಲುಗಡೆ ನೀಡದೇ ಮುಂದುವರಿದಿರುವುದು ರೈಲ್ವೆ ಇಲಾಖೆ ಪ್ರಯಾಣಿಕರ ಬೇಡಿಕೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ರೈಲ್ವೆ ಸಂಘಟನೆಗಳು ಆರೋಪಿಸುತ್ತಿವೆ.