ಪೆಟ್ ಶಾಪ್‍ಗಳ ನೋಂದಣಿ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Apr 19, 2026, 03:00 AM IST
ಸಭೆಯಲ್ಲಿ ಮಾತನಾಡುತ್ತಿರುವ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. | Kannada Prabha

ಸಾರಾಂಶ

ಜೀವಂತ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್‍ಗಳು ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಸೂಚಿಸಿದ್ದಾರೆ.

ಮಂಗಳೂರು: ಜೀವಂತ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಮಾಡುವ ಪೆಟ್ ಶಾಪ್‍ಗಳು ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 20 ಪೆಟ್ ಶಾಪ್‍ಗಳಿದ್ದು, ಈ ಪೈಕಿ ಕೇವಲ 2 ಪೆಟ್ ಶಾಪ್‍ಗಳು ಮಾತ್ರ ಈ ಕಾಯ್ದೆಯಡಿ ನೋಂದಣಿ ಮಾಡಿವೆ. ಕಾಯ್ದೆಯಡಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಬೇಕು. ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು ಪೆಟ್ ಶಾಪ್‍ಗಳಿಗೆ ಟ್ರೇಡ್ ಲೈಸನ್ಸ್ ನೀಡುವ ಮುನ್ನ ಈ ಕಾಯ್ದೆಯಡಿ ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಾಣಿ ದಯಾ ಸಂಘದ ಸದಸ್ಯರು ಮಾತನಾಡಿ, ಕೆಲವು ಪೆಟ್ ಶಾಪ್‍ಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ಕ್ರೂರವಾಗಿ ಇಡಲಾಗುತ್ತಿದ್ದು, ಯಾವುದೇ ರೀತಿಯ ಅಗತ್ಯ ಸೌಕರ್ಯಗಳನ್ನು ಒದಗಿಸುವುದಿಲ್ಲ. ರಾತ್ರಿ ವೇಳೆ ಅಂಗಡಿಗಳ ಬಾಗಿಲನ್ನು ಮುಚ್ಚಿ ಹೋಗುವುದರಿಂದ ಅವುಗಳಿಗೆ ಸೂಕ್ತ ಗಾಳಿ- ಬೆಳಕು ದೊರಕುವುದಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.ಕುಮಾರಧಾರಾ ಸರ್ಕಾರಿ ಗೋಶಾಲೆ ನಿರ್ಮಿಸಲು ಮಂಜೂರು ಮಾಡಿರುವ 98.45 ಎಕರೆ ಭೂಮಿಯ ಗಡಿ ಗುರುತು ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ತಾಲೂಕಿನ ಬೊಂಡಂತಿಲದಲ್ಲಿ ಪ್ರಾಣಿ ಮಿತ್ರ ಆಸ್ಪತ್ರೆ ಸ್ಥಾಪನೆ ಸಂಬಂಧ ಈ ಜಾಗದ ಅತಿಕ್ರಮಣ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ತಿಳಿಸಿದರು.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ಸಂತಾನ ಹರಣ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 11 ಖಾಸಗಿ ಗೋಶಾಲೆಗಳಿಗೆ ಸರ್ಕಾರದಿಂದ 22 ಲಕ್ಷ ರು. ಮೊತ್ತವನ್ನು ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ನಗರದ ನಂದಿಗುಡ್ಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪ್ರಾಣಿಗಳ ಶವಗಾರವನ್ನು ಸಾರ್ವಜನಿಕರ ವಿರೋಧದಿಂದ ಕೈ ಬಿಡಲಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ (ಪಾಲಿ ಕ್ಲಿನಿಕ್) ಗೋಪಾಲಕೃಷ್ಣ ಭಟ್, ಪ್ರಾಣಿ ದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಆತ್ಮಶಕ್ತಿ ಮೂಡುಬಿದಿರೆ ಶಾಖೆಯ ಉದ್ಘಾಟನೆ: ರಾಮಯ್ಯ ಕಾಂಪ್ಲೇಕ್ಸ್ ನಲ್ಲಿ 35ನೇ ಶಾಖೆ
ನಶಿಸುತ್ತಿರುವ ಪರಂಪರೆ ಪುನಃಸ್ಥಾಪಿಸಬೇಕು: ಕಲ್ಕೂರ