ಅಕ್ಟೋಬರ್ 3ರಿಂದ ಮಂಗಳೂರು ದಸರಾ, 13ರಂದು ವೈಭವದ ಶೋಭಾಯಾತ್ರೆ

KannadaprabhaNewsNetwork |  
Published : Oct 01, 2024, 01:32 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಜನಾರ್ದನ ಪೂಜಾರಿ. | Kannada Prabha

ಸಾರಾಂಶ

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವ ಅ.3ರಿಂದ 14ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ವತಿಯಿಂದ ನಡೆಯುವ ಮಂಗಳೂರು ದಸರಾ ಮಹೋತ್ಸವ ಅ.3ರಿಂದ 14ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ದಸರಾ ಮಹೋತ್ಸವವು 1991ರಿಂದ ಕುದ್ರೋಳಿ ಗೋಕರ್ಣನಾಥ ದೇವರ ಕೃಪೆಯಿಂದ ಯಶಸ್ವಿಯಾಗಿ ನಡೆಯುತ್ತಿದೆ. ಜನರೇ ಮಂಗಳೂರು ದಸರಾವನ್ನು ಈ ಹಂತಕ್ಕೆ ಬೆಳೆಸಿದ್ದಾರೆ. ಈ ಬಾರಿಯೂ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮಂಗಳೂರು ದಸರಾ ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ದೇವಸ್ಥಾನ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಮಾತನಾಡಿ, ಅ.3ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಮಂಗಳೂರು ದಸರಾ ಆರಂಭಗೊಂಡು ಅ.14ರಂದು ಬೆಳಗ್ಗೆ 8ಕ್ಕೆ ಗುರುಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ದಸರಾ ಸಂದರ್ಭ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.13ರಂದು ವೈಭವದ ಮೆರವಣಿಗೆಯೊಂದಿಗೆ ದೇಶ ಹಾಗೂ ತುಳುನಾಡಿನ ಸಂಸ್ಕೃತಿ ಅನಾವರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆಯ ಇಕ್ಕೆಲಗಳ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ತುಂಬಬೇಕು ಎಂದು ಮನವಿ ಮಾಡಿದರು.

ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್‌ ಮಿಜಾರು, ಎಂ. ಶೇಖರ್‌ ಪೂಜಾರಿ, ಜಗದೀಪ್‌ ಡಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಉಪಾಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲ್ಯಾನ್‌, ಉಪಾಧ್ಯಕ್ಷ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಸದಸ್ಯರಾದ ಕಿಶೋರ್‌ ದಂಡೆಕೇರಿ, ವಾಸುದೇವ ಕೋಟ್ಯಾನ್‌, ಎಚ್‌.ಎಸ್‌. ಜೈರಾಜ್‌, ಲತೀಶ್‌ ಎಂ. ಸುವರ್ಣ, ರಾಧಾಕೃಷ್ಣ , ಲೀಲಾಕ್ಷ ಕರ್ಕೇರ, ಚಂದನ್‌ದಾಸ್‌, ಗೌರವಿ ರಾಜಶೇಖರ್‌, ಕೃತಿನ್‌ ದೀರಾಜ್‌ ಅಮೀನ್‌ ಇದ್ದರು.

.....................

13ರಂದು ಶೋಭಾಯಾತ್ರೆ, ಸುಪ್ರೀಂ ನಿರ್ದೇಶನದಂತೆ ಟ್ಯಾಬ್ಲೊ

ಕುದ್ರೋಳಿ ಕ್ಷೇತ್ರ ನವೀಕರಣ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಅ.13ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ ಆರಂಭವಾಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಹೇಳಿದರು.

ತುಳುನಾಡಿನ ಸಂಸ್ಕೃತಿಗೆ ಚ್ಯುತಿ ಬಾರದಂತೆ ಟ್ಯಾಬ್ಲೋಗಳನ್ನು ರಚಿಸುವಂತೆ ಈಗಾಗಲೇ ಕ್ಷೇತ್ರದ ವತಿಯಿಂದ ಸಭೆ ಕರೆದು ಟ್ಯಾಬ್ಲೋ ರಚಿಸುವವರಿಗೆ ಸೂಚನೆ ನೀಡಲಾಗಿದೆ. ಡಿಜೆ ಹಾಗೂ ಇತರ ಧ್ವನಿವರ್ಧಕಗಳ ಕುರಿತಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸಲಾಗುವುದು. ಭಕ್ತರ ಸುರಕ್ಷತೆ ದೃಷ್ಟಿಯಲ್ಲಿ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ಪದ್ಮರಾಜ್‌ ಆರ್‌. ತಿಳಿಸಿದರು.........................

ಈ ಬಾರಿ ದ್ವಾರದೊಳಗೆ ಸಂತೆ ಇಲ್ಲ

ಲಕ್ಷಾಂತರ ಸಂಖ್ಯೆಯಲ್ಲಿ ಜನರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ದೇವಾಲಯದ ದ್ವಾರದ ಒಳಭಾಗದ ರಸ್ತೆಯಲ್ಲಿ ಸಂತೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಹರಾಜು ಮೂಲಕ ಸಂತೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುತ್ತಿತ್ತು. ಆದರೆ ಈ ಬಾರಿ ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿರುವುದರಿಂದ ಮಹಾನಗರ ಪಾಲಿಕೆ ಅಧೀನದ ರಸ್ತೆಯಲ್ಲಿ ಮನಪಾ ವತಿಯಿಂದ ಹರಾಜು ಮೂಲಕ ಸಂತೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪದ್ಮರಾಜ್‌ ಪ್ರತಿಕ್ರಿಯಿಸಿದರು................

6ರಂದು 21 ಕಿ.ಮೀ. ಹಾಫ್‌ ಮ್ಯಾರಥಾನ್‌

ದಸರಾ ಪ್ರಯುಕ್ತ ಕಳೆದ ವರ್ಷ ವಾಕಥಾನ್‌ ನಡೆಸಲಾಗಿದ್ದು, ಈ ಬಾರಿ ವಿಶೇಷವಾಗಿ ಅ.6ರಂದು ಬೆಳಗ್ಗೆ 5.30ಕ್ಕೆ ಕ್ಷೇತ್ರದಿಂದ 21 ಕಿ.ಮೀ. ಹಾಫ್‌ ಮ್ಯಾರಥಾನ್‌ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಮ್ಯಾರಥಾನ್‌ನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪದ್ಮರಾಜ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''