ಒಂದೇ ಗಂಟೆಯ ಮಳೆಗೆ ಮಂಗಳೂರು ಅಸ್ತವ್ಯಸ್ತ!

KannadaprabhaNewsNetwork |  
Published : May 21, 2024, 12:40 AM IST
೩೨ | Kannada Prabha

ಸಾರಾಂಶ

ಮಂಗಳೂರು ನಗರದಲ್ಲಿ ಸುಮಾರು ಏಳು ಗಂಟೆಯಿಂದ ಸಾಧಾರಣವಾಗಿ ಆರಂಭವಾದ ಮಳೆ ಎಂಟು ಗಂಟೆಯ ಬಳಿಕ ಧಾರಾಕಾರ ಸುರಿಯತೊಡಗಿತು. ನಗರದ ಅಲ್ಲಲ್ಲಿ ರಸ್ತೆ ಅಗೆದು ಹಾಕಿರುವುದು, ಚರಂಡಿಗಳ ಹೂಳೆತ್ತದೆ ಇರುವುದು, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಹೆಚ್ಚಿನ ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಬೇಕಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಕೇವಲ ಒಂದು ಗಂಟೆ ಸುರಿದ ಈ ಬೇಸಿಗೆಯ ಮೊದಲ ಭಾರಿ ಮಳೆಗೆ ನಗರ ಅಸ್ತವ್ಯಸ್ತಗೊಂಡಿದೆ. ನಗರದ ಹಲವೆಡೆ ತಗ್ಗು ಪ್ರದೇಶಗಳ ಅಂಗಡಿಗಳಿಗೆ ನೀರು ನುಗ್ಗಿದೆ.ಸುಮಾರು ಏಳು ಗಂಟೆಯಿಂದ ಸಾಧಾರಣವಾಗಿ ಆರಂಭವಾದ ಮಳೆ ಎಂಟು ಗಂಟೆಯ ಬಳಿಕ ಧಾರಾಕಾರ ಸುರಿಯತೊಡಗಿತು. ನಗರದ ಅಲ್ಲಲ್ಲಿ ರಸ್ತೆ ಅಗೆದು ಹಾಕಿರುವುದು, ಚರಂಡಿಗಳ ಹೂಳೆತ್ತದೆ ಇರುವುದು, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಹೆಚ್ಚಿನ ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಬೇಕಾಯಿತು.

ನಗರದ ಬಿಕರ್ನಕಟ್ಟೆಯಲ್ಲಿ ಹೆದ್ದಾರಿ ಬದಿ ಚರಂಡಿಯ ನೀರು ಉಕ್ಕಿ ಹರಿದು ಎರಡು ಮೂರು ಅಂಗಡಿಗಳ ಒಳಗೆ ನುಗ್ಗಿದೆ. ಅದೇ ರೀತಿ ಕೊಟ್ಟಾರ ಚೌಕಿ, ಕುದ್ರೋಳಿ ಬಂದರ್ ಪ್ರದೇಶ, ಕೊಡಿಯಾಲಬೈಲ್ ನಲ್ಲಿ ಕೆಲವು ಅಂಗಡಿಗಳಿಗೆ ನೀರು ನುಗ್ಗಿರುವ ಮಾಹಿತಿ ಲಭಿಸಿದೆ. ಸುಮಾರು 9.30ರ ವೇಳೆಗೆ ಮಳೆ ಕೊಂಚ ಇಳಿಮುಖವಾದ ನಂತರ ಪರಿಸ್ಥಿತಿ ಹತೋಟಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸೋಮವಾರವೂ ಮಳೆ ಮುಂದುವರಿದಿದೆ. ಮೇ 24ರವರೆಗೂ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಸುರಿಯುತ್ತಿದೆ. ಸುಳ್ಯ, ಕೊಕ್ಕಡ, ಶಿಶಿಲ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಉತ್ತಮ ಮಳೆಯಾಗಿತ್ತು. ಸಂಜೆ ವೇಳೆಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಸೇರಿದಂತೆ ಹಲವಡೆ ಸಾಧಾರಣ ಮಳೆ ದಾಖಲಾಗಿದೆ. ಸುಬ್ರಹ್ಮಣ್ಯ ಭಾಗದಲ್ಲಿ ಗುಡುಗು ಸಹಿತ ಹನಿ ಮಳೆ ಸುರಿದಿದೆ.ಜಿಲ್ಲೆಯಲ್ಲಿ ದಿನವಿಡಿ ಬಿಸಿಲು, ಮೋಡ ಕವಿದ ವಾತಾವರಣ ಕಂಡುಬಂದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವಡೆ ಮೇ 24ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಅಲೆಗಳ ಅಬ್ಬರ:ಅರಬ್ಬಿ ಸಮುದ್ರದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಅಲೆಗಳ ಅಬ್ಬರ ಕಂಡುಬಂದಿದೆ. ಬಿರುಗಾಳಿಯ ಸಾಧ್ಯತೆ ಇರುವುದರಿಂದ ಮುಂದಿನ 2 ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.ಉಷ್ಣಾಂಶ ಇಳಿಕೆ:ಕಳೆದ 2-3 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಗರಿಷ್ಠ ಉಷ್ಣಾಂಶ 30 ಡಿ.ಸೆ.ಗಿಂತ ಕಡಿಮೆ ದಾಖಲಾಗಿದ್ದು, ಆಹ್ಲಾದಕರ ವಾತಾವರಣವಿತ್ತು. ಜಿಲ್ಲೆಯಲ್ಲಿ ಸೋಮವಾರ ಸರಾಸರಿ 29.6 ಡಿಗ್ರಿ ಗರಿಷ್ಠ, 23.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾನುವಾರ ಹಾಗೂಸೋಮವಾರ ಸಾಧರಣ ಮಳೆಯಾಗಿದೆ.ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ದಿನವಿಡೀಮೋಡ ಕವಿದ ವಾತವರಣ ಇದ್ದಿದ್ದು, ಸಂಜೆ ವೇಳೆಗೆ ಹನಿ ಮಳೆಯಾಗಿದೆ. ಸುಬ್ರಹ್ಮಣ್ಯ, ಐನೆಕಿದು, ಗುತ್ತಿಗಾರು, ಕೈಕಂಬ, ಕುಲ್ಕುಂದ, ಬಳ್ಪ ಮತ್ತಿತರ ಪರಿಸರದಲ್ಲಿ ಸಾಧರಣ ಹನಿ ಮಳೆಯಾಗಿದೆ.ಸಿಡಿಲಿಗೆ ಶಾಕ್ !

ಭಾನುವಾರ ರಾತ್ರಿ ಭಾರಿ ಸದ್ದಿನ ಸಿಡಿಲು ಬಡಿತ ಉಂಟಾಗಿದ್ದು, ಈ ಸಂದರ್ಭದಲ್ಲಿ ಪೇಟೆ, ಅಂಗಡಿಗಳ ಬಳಿ ಕಬ್ಬಿಣ ಹಿಡಿದ ಜನರಿಗೆ ಸಿಡಿಲ ತೀವ್ರತೆಗೆ ಶಾಕ್ ತಗುಲಿದ ಅನುಭವ ಉಂಟಾದ ಬಗ್ಗೆ ತಿಳಿಸಿದ್ದಾರೆ. ಘಟನೆಯಲ್ಲಿ ಒಂದಿಬ್ಬರು ಅಸ್ವಸ್ಥಗೊಂಡ ಘಟನೆಯೂ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!