ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಐವನ್‌ ಮನವಿ

KannadaprabhaNewsNetwork |  
Published : Sep 21, 2026, 02:30 AM IST
ಐವನ್‌ ಡಿಸೋಜಾ ಸುದ್ದಿಗೋಷ್ಠಿ  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮಂಗಳೂರು ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಿದ್ದು, ಇನ್ನು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಂಸದರು, ಕೇಂದ್ರ ಸಚಿವರು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

ಮಂಗಳೂರು: ರಾಜ್ಯ ಸರ್ಕಾರ ಮಂಗಳೂರು ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಿದ್ದು, ಇನ್ನು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಂಸದರು, ಕೇಂದ್ರ ಸಚಿವರು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಡಿ ಸೇರ್ಪಡೆ ವಿಚಾರದಲ್ಲಿ ನಾನು 2014ರಲ್ಲೇ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಪ್ರಪಂಚದಾದ್ಯಂತ ಸುಮಾರು ಒಂದು ಕೋಟಿ ಮಂದಿ ತುಳು ಭಾಷಿಗರಿದ್ದು, ತುಳುವರಿಗೆ ನ್ಯಾಯ ದೊರಕಿಸುವಂತೆ ಆಗಿನ ಸಂಸ್ಕೃತಿ ಇಲಾಖೆ ಸಚಿವರಲ್ಲಿ ಪ್ರಶ್ನಿಸಿದ್ದೆ. ತುಳು ಭಾಷೆ ಮಾನ್ಯತೆ ಬಗ್ಗೆ 2013ರಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿರುವ ಬಗ್ಗೆ ನನಗೆ ಉತ್ತರ ನೀಡಲಾಗಿತ್ತು. ಆ ಉತ್ತರದಲ್ಲಿ, 22 ಭಾಷೆ ಜೊತೆಗೆ ಇನ್ನೂ 38 ಭಾಷೆ ಸೇರಿಸಲು ಏಕರೂಪ ಮಾನದಂಡ ನಿಗದಿಗೆ ಸಮಿತಿ ರಚಿಸಲು ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಸಂಸದರು, ಕೇಂದ್ರ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ಕರ್ನಾಟಕದಲ್ಲಿ ರಾಜ್ಯದ 2ನೇ ಭಾಷೆಯಾಗಿ ಅಂಗೀಕಾರ ಪಡೆದಿರುವ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಮನಸ್ಸು ಮಾಡಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದರು.

ಈಗ ರಾಜ್ಯ ಸರ್ಕಾರದ ಭಾಷಾ ಅಂಗೀಕಾರ ಸಿಕ್ಕಿರುವುದರಿಂದ ಇನ್ನು ರಾಜ್ಯದ ಎಲ್ಲಿಯೂ ತುಳುವಿನಲ್ಲಿ ಭಾಷಣವೂ ಮಾಡಬಹುದು. ಅಸೆಂಬ್ಲಿಯಲ್ಲೂ ತುಳುವಿನಲ್ಲಿ ಮಾತನಾಡಲು ಅ‍ವಕಾಶ ಇದೆ. ಮುಂದೆ ಲೋಕಸಭೆ, ರಾಜ್ಯಸಭೆಗಳಲ್ಲೂ ತುಳುವಿನಲ್ಲಿ ಮಾತನಾಡಲು ಅವಕಾಶ ಸಿಗುವಂತಾಗಬೇಕು ಎಂದರು.

ಮುಂದಿನ ಕ್ಯಾಬಿನೆಟ್‌ನಲ್ಲಿ ‘ಮಂಗಳೂರು’ ಹೆಸರು ಘೋಷಣೆ:

ರಾಜ್ಯ ಹಾಗೂ ಕೇಂದ್ರದಲ್ಲಿ ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದರೂ ತುಳುವಿಗೆ ಮನ್ನಣೆ ನೀಡಲು ಸಾಧ್ಯವಾಗಿಲ್ಲ. ಅದೀಗ ನನಸಾಗಿದೆ. ದ.ಕ. ಜಿಲ್ಲೆಯ ಹೆಸರು ‘ಮಂಗಳೂರು’ ಆಗಿ ಮುಂದಿನ ಕ್ಯಾಬಿನೆಟ್‌ನಲ್ಲಿ ಘೋಷಣೆಯಾಗಲಿದೆ. ಮೂಲಸೌಕರ್ಯ ಸೇರಿದಂತೆ ಅನೇಕ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಿದೆ. ಬಿಜೆಪಿ ಮತಬ್ಯಾಂಕ್‌ ರಾಜಕಾರಣ ಬಿಟ್ಟರೆ ಅಭಿವೃದ್ಧಿಯತ್ತ ಮನಸ್ಸು ಮಾಡಿಲ್ಲ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೂ ಸರ್ಕಾರ ಒತ್ತು ನೀಡುತ್ತಿದ್ದು, ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆ ಕಾಣಲಿದೆ ಎಂದರು.

ಹೈ ಸಂಚಾರಿ ಪೀಠಕ್ಕೆ ಸಮಿತಿ ರಚನೆ: ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆ ಕುರಿತಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸಮಿತಿಯನ್ನು ರಚಿಸಿದ್ದು, ಆ ಸಮಿತಿ ಬೇಡಿಕೆಯ ಹಿಂದಿನ ಸತ್ಯಾಸತ್ಯತೆ ತಿಳಿದುಕೊಂಡು ವರದಿ ಸಲ್ಲಿಸಲಿದೆ. ಆದರೆ ಬೆಂಗಳೂರಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ವಾಸ್ತವದಲ್ಲಿ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಭಾಗಗ‍ಳಿಂದ ಮಂಗಳೂರಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಬೆಂಬಲ ಇದೆ. ಈ ಬೇಡಿಕೆ ಖಂಡಿತ ಈಡೇರುತ್ತದೆ ಎಂದರು.

‘ವಂದೇ ಮಾತರಂ’ ರಾಜಕೀಯ ಉದ್ದೇಶ: ವಂದೇ ಮಾತರಂ ವಿಚಾರದಲ್ಲಿ ಬಿಜೆಪಿ ರಾಜಕೀಯ ಉದ್ದೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರ ಸರ್ಕಾರ ರಾಷ್ಟ್ರಗೀತೆ ಎಂದು ನಿಯಮ ರೂಪಿಸಿದರೂ ರಾಜ್ಯ ಸರ್ಕಾರ ತನ್ನದೇ ಅಧಿಕಾರ ಬಳಸಿಕೊಂಡು ಅದರ ಎರಡು ಚರಣ ಹಾಡಲು ನಿರ್ಧರಿಸಿದೆ. ಆದರೆ ಕೇಂದ್ರ ಕಾರ್ಯಕ್ರಮಗಳಲ್ಲಿ ಪೂರ್ಣ ಹಾಡು ಹಾಡಲು ರಾಜ್ಯದ ವಿರೋಧ ಇಲ್ಲ ಎಂದು ಐವನ್‌ ಡಿಸೋಜಾ ಈ ಕುರಿತ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಪಾಲಿಕೆ ಮಾಜಿ ಸದಸ್ಯೆ ಅಪ್ಪಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಫ್ ಕಲಾ ಒಕ್ಕೂಟ ಕೊಡಗಿನಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಗಾಡ್ರೆಜ್, ಟ್ರ್ಯಾಕ್ ಶೂಟ್ ವಿತರಣೆ