ಮಂಗಳೂರು-ಕಾರ್ಕಳ ಹೆದ್ದಾರಿ ಅಭಿವೃದ್ಧಿ: ಸಂಕಷ್ಟ ಸರಮಾಲೆ

KannadaprabhaNewsNetwork | Published : May 21, 2024 12:34 AM

ಸಾರಾಂಶ

ಭಾನುವಾರ ಮೂಡುಬಿದಿರೆಯಲ್ಲಿ ನಡೆದ ಭೂಮಾಲೀಕರ ಹೋರಾಟ ಸಮಿತಿಯ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭೂಮಾಲೀಕರು ಪದಾಧಿಕಾರಿಗಳ ಮುಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಮಸ್ಯೆಗಳ ಕುರಿತು ಅಳಲನ್ನು ತೋಡಿ ಕೊಂಡರು. ಸರ್ವೇ, ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಗುತ್ತಿಗೆದಾರರ ಕಡೆಯವರು ಪರಿಹಾರ ನೀಡದ ಜಾಗಗಳಲ್ಲಿಯೂ ಬುಲ್ಡೋಜರ್ ತಂದು ಭೂ ಮಾಲೀಕರನ್ನು ದಿಕ್ಕು ತಪ್ಪಿಸಿ ಒತ್ತಡ ಹಾಕುತ್ತಿದ್ದಾರೆ. ಪರಿಹಾರ ಕೊಟ್ಟ ಭೂ ಮಾಲೀಕರಿಗೂ ಸ್ಥಳಾಂತರಕ್ಕೆ ಸಮಯಾವಕಾಶ ನೀಡುತ್ತಿಲ್ಲಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಂಗಳೂರು ಕಾರ್ಕಳ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಸರ್ವೇ, ಭೂಸ್ವಾಧೀನ ಪ್ರಕಿಯೆಯಲ್ಲಿ ಅಧಿಕಾರಿಗಳ ಲೋಪದಿಂದ ಭೂಮಿ ಕಳೆದುಕೊಳ್ಳುವವರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು... ಗಾಯದ ಮೇಲೆ ಬರೆ ಎಳೆದಂತೆ ಹೈವೇ ಗುತ್ತಿಗೆದಾರರು ಸರ್ವೇ ಆಗದ, ಪರಿಹಾರ ಸಿಗದ ಸ್ಥಳಕ್ಕೂ ಬಂದು ಅಕ್ರಮವಾಗಿ ಕಾಮಗಾರಿಗೆ ಮುಂದಾಗುತ್ತಿರುವುದು... ಸುರಕ್ಷತಾ ನಿಯಮಗಳನ್ನೇ ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿರುವುದು.... ಮಳೆಗಾಲದಲ್ಲಿ ಕಾಮಗಾರಿಯ ಪ್ರದೇಶದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ.. ಹೀಗೆ ಬಹಳಷ್ಟು ದೂರುಗಳು ಕೇಳಿ ಬಂದಿವೆ. ಭಾನುವಾರ ಇಲ್ಲಿನ ಪಂಚರತ್ನ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಭೂಮಾಲೀಕರ ಹೋರಾಟ ಸಮಿತಿಯ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭೂಮಾಲೀಕರು ಪದಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿ ಕೊಂಡರು.

ಸರ್ವೇ, ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಗುತ್ತಿಗೆದಾರರ ಕಡೆಯವರು ಪರಿಹಾರ ನೀಡದ ಜಾಗಗಳಲ್ಲಿಯೂ ಬುಲ್ಡೋಜರ್ ತಂದು ಭೂ ಮಾಲೀಕರನ್ನು ದಿಕ್ಕು ತಪ್ಪಿಸಿ ಒತ್ತಡ ಹಾಕುತ್ತಿದ್ದಾರೆ. ಪರಿಹಾರ ಕೊಟ್ಟ ಭೂ ಮಾಲೀಕರಿಗೂ ಸ್ಥಳಾಂತರಕ್ಕೆ ಸಮಯಾವಕಾಶ ನೀಡುತ್ತಿಲ್ಲ. ಈ ಬಗ್ಗೆ ವಿಶೇಶ ಭೂಸ್ವಾಧೀನಾಧಿಕಾರಿ, ಜಿಲ್ಲಾಧಿಕಾರಿ ಮತ್ತು ರಾ.ಹೆ. ಅಭಿವೃದ್ಧಿ ಪ್ರಾಧಿಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ.

ಕಿರುಕುಳ ಮುಂದುವರಿದರೆ ಕ್ರಿಮಿನಲ್ ಕೇಸು ದಾಖಲಿಸುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಸರ್ವೇ ಮಾಡುವಾಗ ಸಣ್ಣ ಪುಟ್ಟ ವಿಚಾರಗಳಲ್ಲಿಯೂ ಅಧಿಕಾರಿಗಳು ಲೋಪ ಎಸಗಿದ್ದಾರೆ. ಈಗ ಅದಕ್ಕೆ ಭೂಮಾಲೀಕರು ತಲೆ ನೀಡಬೇಕಾಗಿದೆ. ತಪ್ಪುಗಳನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ , ಕಿರುಕುಳ ನೀಡುತ್ತಿದ್ಧಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿ ಬಂತು.

ಸರ್ಕಾರಿ ಭೂಮಿ, ಸಾರ್ವಜನಿಕ ಕಟ್ಟಡ, ತಂಗುದಾಣ ತೆರವುಗೊಳಿಸಿರುವುದಕ್ಕೆ ಪರಿಹಾರವನ್ನೇ ನಿಗದಿ ಪಡಿಸಿಲ್ಲ. ಪರ್ಯಾಯ ವ್ಯವಸ್ಥೆಯನ್ನೂ ಮಾಡದೇ ಜನರಿಗೆ ತೊಂದರೆಯಾಗುತ್ತಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು.

ಮಳೆಗಾಲ ಆರಂಭವಾಗುತ್ತಿರುವ ಈ ಹೊತ್ತಿನಲ್ಲಿ ಹಲವೆಡೆ ಮಣ್ಣಿನ ಅಗೆತ, ರಾಶಿಗಳು ಯಾವುದೇ ಅಪಾಯಕ್ಕೆ ಕಾರಣವಾಗಬಹುದು. ತಗ್ಗು ಪ್ರದೇಶಗಳು ಅಪಾಯಲ್ಲಿವೆ. ಸುರಕ್ಷತಾ ನಿಯಮಗಳನ್ನೇ ಗಾಳಿಗೆ ತೂರಿ ಗುತ್ತಿಗೆದಾರರ ಕಂಪನಿಯವರು ನಡೆಸುತ್ತಿರುವ ಕಾಮಗಾರಿ ದೊಡ್ಡ ಅನಾಹುತಕ್ಕೆ ಕಾರಣವಾಗುವ ಅಪಾಯವಿದೆ ಎನ್ನುವ ಬಗ್ಗೆ ಹೆಚ್ಚಿನವರು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೂ ಗಮನ ಹರಿಸಿ ಸಾರ್ವಜನಿಕರನ್ನು ತೊಂದರೆಯಿಂದ ರಕ್ಷಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಎಲ್ಲ ಸಮಸ್ಯೆಗಳ ಬಗ್ಗೆ ವಿಶೇಷ ಭೂಸ್ವಾಧಿನಾಧಿಕಾರಿ, ಜಿಲ್ಲಾಧಿಕಾರಿ ಮತ್ತು ರಾ.ಹೆ. ಅಭಿವೃದ್ಧಿ ಪ್ರಾಧಿಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.

ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್, ಸಂಚಾಲಕ ಪ್ರಕಾಶ್ಚಂದ್ರ , ಪ್ರೇಮಲತಾ ಶೆಟ್ಟಿ, ಬೃಜೇಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಜಯರಾಜ್ ಪೂಜಾರಿ, ಸಾಣೂರು ನರಸಿಂಹ ಕಾಮತ್, ತಿಮ್ಮಯ್ಯ ಶೆಟ್ಟಿ ಉಪಸ್ಥಿತರಿದ್ದು ಸಂತಸ್ತರ ಸಮಸ್ಯೆಗಳನ್ನು ಆಲಿಸಿ ಮಾರ್ಗದರ್ಶನ ನೀಡಿದರು.

ಭೂಮಾಲೀಕರು, ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Share this article