ಕುದ್ರೋಳಿ ಕ್ಷೇತ್ರ ತೀರ್ಥಾಟನೆ: ಸಹಸ್ರಾರು ಮಂದಿ ಭಾಗಿ

KannadaprabhaNewsNetwork |  
Published : Feb 23, 2026, 03:00 AM IST
ಕುದ್ರೋಳಿ ಕ್ಷೇತ್ರ ತೀರ್ಥಾಟನೆ ನಡೆಯಿತು. | Kannada Prabha

ಸಾರಾಂಶ

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ ಹೊರಟ ತೀರ್ಥಾಟನೆ ಪುರಭವನ, ಕ್ಲಾಕ್‌ಟವರ್, ನವಭಾರತ ಸರ್ಕಲ್, ಪಿವಿಎಸ್, ಎಂಜಿ ರಸ್ತೆ, ನಾರಾಯಣಗುರು ವೃತ್ತದ ಮೂಲಕ ಸಾಗಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ದಿನದ ನೆನಪಿನಲ್ಲಿ ನಗರದಲ್ಲಿ ಶನಿವಾರ ‘ನಮ್ಮ ನಡಿಗೆ -ಶ್ರೀ ಗುರುವಿನೆಡೆಗೆ’ ಎಂಬ ಸಂಕಲ್ಪದೊಂದಿಗೆ ಶ್ರೀ ಕುದ್ರೋಳಿ ಕ್ಷೇತ್ರ ತೀರ್ಥಾಟನೆಗೆ ಸಹಸ್ರಾರು ಮಂದಿ ಸಾಕ್ಷಿಯಾದರು.

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ ಹೊರಟ ತೀರ್ಥಾಟನೆ ಪುರಭವನ, ಕ್ಲಾಕ್‌ಟವರ್, ನವಭಾರತ ಸರ್ಕಲ್, ಪಿವಿಎಸ್, ಎಂಜಿ ರಸ್ತೆ, ನಾರಾಯಣಗುರು ವೃತ್ತದ ಮೂಲಕ ಸಾಗಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ತಲುಪಿತು.

ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಧಾರಣೆಯೊಂದಿಗೆ ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡಿಗೆ ನೆರವೇರಿತು.

ತೀರ್ಥಾಟನೆ ಬಳಿಕ ಕುದ್ರೋಳಿ ಕ್ಷೇತ್ರದಲ್ಲಿ ಧಾರ್ಮಿಕ ಪ್ರವಚನ ನೀಡಿದ ಕೇರಳ ಶಿವಗಿರಿ ಮಠದ ಅಧ್ಯಕ್ಷ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವಾದ್ಯಂತ ಕೋಟಿಗಟ್ಟಲೆ ಜನತೆಯ ಪ್ರತ್ಯಕ್ಷ ದೇವರಾಗಿದ್ದಾರೆ. ಆಧುನಿಕ ಭಾರತದ ವಿಶ್ವಗುರು ನಾರಾಯಗಳ ಗುರುಗಳು ಎಂದು ಹೇಳಿದರು.

ನಾರಾಯಣಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಕುದ್ರೋಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೊಂದು ಪುಣ್ಯ ದಿನ. ಶಬರಿಮಲೆಯಲ್ಲಿ ಪ್ರತಿ ವರ್ಷ ತೀರ್ಥಾಟನೆ ಆಗುತ್ತಿದೆ. ಅದು ಬಿಟ್ಟರೆ ಶಿವಗಿರಿಯಲ್ಲಿ ತೀರ್ಥಾಟನೆ ನಡೆಯುತ್ತದೆ. ಮುಂಬೈ, ಬಹರೇನ್, ದುಬೈ, ಕುವೈಟ್‌ನಲ್ಲೂ ಶಿವಗಿರಿ ತೀರ್ಥಾಟನೆ ನಡೆಯುತ್ತಿದೆ. ಇದೀಗ ಮಂಗಳೂರಿನಲ್ಲಿ ತೀರ್ಥಾಟನೆ ಆರಂಭಿಸಿರುವುದು ಸಂತಸ ತಂದಿದೆ. ನಾರಾಯಣ ಗುರು ಜನಿಸಿದ್ದು ಕೇರಳದಲ್ಲಾದರೂ ಭಾರತದಲ್ಲೂ ಪ್ರಪಂಚದ ಎಲ್ಲ ಕಡೆಯೂ ಅವರ ಚಳವಳಿ ಖ್ಯಾತಿ ಗಳಿಸಿದೆ ಎಂದರು.

ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅಶೀರ್ವಚನ ನೀಡಿ, ವೇದವ್ಯಾಸರು ವೇದಗಳನ್ನು ಎತ್ತಿ ಹಿಡಿದರೆ, ವೇದದ ಸಾರವನ್ನು ಜನಸಾಮಾನ್ಯರಿಗೆ ಪಸರಿಸಿದವರು ನಾರಾಯಣ ಗುರುಗಳು. ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಅವರು ಹಿಂದುಗಳಿದ ವರ್ಗಗಳ ಜನರಿಗೆ ಸ್ವಾಭಿಮಾನದ ಬದುಕು ನೀಡಿದವರು. ಜನಾರ್ದನ ಪೂಜಾರಿ ಅವರಂತಹ ನಾಯಕರು ರೂಪುಗೊಳ್ಳಬೇಕು ಎಂದರು.

ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬಿಲ್ಲವ ಸಮಾಜ ನಾರಾಯಣಗುರು ಅವರನ್ನು ಗುರುವಾಗಿ ಸ್ವೀಕರಿಸಿದ್ದು, ಅವರು ನಿರ್ಮಿಸಿದ ಕುದ್ರೋಳಿ ಕ್ಷೇತ್ರ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವೀಯ ಮೌಲ್ಯವನ್ನು ಜಗತ್ತಿಗೆ ತೋರಿಸಿಕೊಟ್ಟವರು ನಾರಾಯಣ ಗುರುಗಳು ಎಂದರು.

ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ನಾರಾಯಣಗುರುಗಳು ಶೋಷಿತ ವರ್ಗ, ಬಡಜನತೆಯ ಗುರು. ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಕುದ್ರೋಳಿ ತೀರ್ಥಾಟನೆ ಪ್ರತಿ ವರ್ಷ ನಡೆಯಲಿ ಎಂದರು.

ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ, ಶ್ರೀ ಅಸಾಂಗನಂದ ಸ್ವಾಮೀಜಿ, ಶ್ರೀ ದೇವಾತ್ಮಾನಂದ ಸ್ವಾಮೀಜಿ, ಶ್ರೀ ವಿರಜಾನಂದ ಸ್ವಾಮೀಜಿ, ಶ್ರೀ ಶಂಕರಾನಂದ ಸ್ವಾಮೀಜಿ, ನಾಗಾ ಸಾಧು ಶ್ರೀ ವಿಠಲಗಿರಿ ತಪೋನಿಧಿ ಮಹಾರಾಜ್, ನಿಪ್ಪಾಣಿಯ ಶ್ರೀ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷ ಊರ್ಮಿಳಾ ರಮೇಶ್ ಇದ್ದರು. ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಸ್ವಾಗತಿಸಿದರು.

ನಡಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಜೈರಾಜ್ ಸೋಮಸುಂದರ್, ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಸಂತೋಷ್ ಕುಮಾರ್, ಕೃತಿನ್ ಡಿ. ಅಮೀನ್, ಕುದ್ರೋಳಿ ದೇವಳ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಸೂರ್ಯಕಾಂತ್ ಜೆ. ಸುವರ್ಣ, ಹರೀಶ್ ಕುಮಾರ್, ಗೌರವಿ ರಾಜಶೇಖರ್, ಲೀಲಾಕ್ಷ ಕರ್ಕೇರ, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ, ಮುಖಂಡರಾದ ಶಶಿಧರ್ ಹೆಗ್ಡೆ, ಅಪ್ಪಿ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ರೆ ಬೀದಿಗಳಿದು ಹೋರಾಟ: ಬಿ.ಶ್ರೀರಾಮುಲು
ಕಿನ್ನಿಗೋಳಿಯಲ್ಲಿ ಶೀಘ್ರದಲ್ಲಿ ಒಳಚರಂಡಿ ಯೋಜನೆ ಜಾರಿ: ಶಾಸಕ ಉಮಾನಾಥ ಕೋಟ್ಯಾನ್‌