ಇಂದು, ನಾಳೆ ‘ಮಂಗಳೂರು ಲಿಟ್‌ ಫೆಸ್ಟ್‌-2026’; ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಮೀನಾಕ್ಷಿ ಜೈನ್‌ಗೆ ಪ್ರಶಸ್ತಿ

KannadaprabhaNewsNetwork |  
Published : Jan 10, 2026, 03:00 AM IST
ಸುನಿಲ್‌ ಕುಲಕರ್ಣಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ವಿಶಿಷ್ಟವಾಗಿ ನಡೆಯಲಿದೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ.

ಮಂಗಳೂರು: ನಾಡಿನ ಹೆಮ್ಮೆ ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ವಿಶಿಷ್ಟವಾಗಿ ನಡೆಯಲಿದೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ತಿಳಿಸಿದೆ.ಭಾರತ್‌ ಫೌಂಡೇಷನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಪರಿಕಲ್ಪನೆಯನ್ನು ಸಾರುವ ಮಂಗಳೂರು ಲಿಟ್ ಫೆಸ್ಟ್ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿ ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜ.10ರಂದು ಬೆಳಿಗ್ಗೆ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ಗಣ್ಯರಾದ ಶತಾವಧಾನಿ ಡಾ. ಆರ್. ಗಣೇಶ್, ಮೀನಾಕ್ಷಿ ಜೈನ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರವಿ. ಎಸ್ (ಮಿಥಿಕ್ ಸೊಸೈಟಿ), ಡಾ. ಅಜಕ್ಕಳ ಗಿರೀಶ್ ಭಟ್ ಹಾಜರಿರುತ್ತಾರೆ ಎಂದರು.

ಸಮಾರಂಭದಲ್ಲಿ ಈ ವರ್ಷದ ಪ್ರಶಸ್ತಿ ಪುರಸ್ಕೃತರಾದ ಪದ್ಮಶ್ರೀ ಮೀನಾಕ್ಷಿ ಜೈನ್ ಅವರ ಜೊತೆಗೆ ವಿಶೇಷ ಸಂವಾದ ನಡೆಯಲಿದೆ. ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ‘ಭೈರಪ್ಪ ಅವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ’ ಎಂಬ ಗೋಷ್ಠಿ ಆಯೋಜಿಸಲಾಗಿದ್ದು, ಶತಾವಧಾನಿ ಆರ್ ಗಣೇಶ್ ಮತ್ತು ಜಿ.ಬಿ. ಹರೀಶ ಈ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.ಭಾರತದ ಗುಪ್ತಚರ ಸಂಸ್ಥೆಯಾದ ‘ರಾ’ದ ಮಾಜಿ ಮುಖ್ಯಸ್ಥರಾದ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಕಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ ಎಂದರು.

ಲಿಟ್ ಫೆಸ್ಟ್ ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯ ರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ. ಆರ್ ಗಣೇಶ್, ಡಾ. ಅಜಕ್ಕಳ ಗಿರೀಶ ಭಟ್ ಅವರು ಸಾಹಿತ್ಯದ ಮುಖಾಂತರ ಮೌಲ್ಯಗಳ ಅಣ್ವೇಷಣೆ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಮಾಧ್ಯಮ ರಂಗದ ಪ್ರಖ್ಯಾತ ಹೆಸರುಗಳಾದ ಎಎನ್ಐ ಸಂಪಾದಕೀಯ ನಿರ್ದೇಶಕರಾದ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಮತ್ತು ಸುರಭಿ ಹೊದಿಗೆರೆ ಅವರು ಸಾರ್ವಜನಿಕ ಕ್ಷೇತ್ರವನ್ನು ಡಿಜಿಟಲ್ ಸುದ್ದಿಗಳು ಹೇಗೆ ರೂಪಿಸುತ್ತಿವೆ ಎಂಬುದರ ಕುರಿತು ಚರ್ಚಿಸಲಿದ್ದಾರೆ. ಚಿತ್ರ ಮತ್ತು ಚಿಂತನೆ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ‘ಬದುಕುಳಿದವರು ಕಂಡಂತೆ’ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ಖ್ಯಾತ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಮತ್ತು ಲೇಖಕಿ ಸೀಮಾ ಬುರುಡೆ ಅವರು ಭಾಗವಹಿಸಲಿದ್ದಾರೆ. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದರು.ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ವಿಶೇಷವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಇಲ್ಲಿ ಅನೇಕ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ ಎಂದರು. ಸದಸ್ಯರಾದ ರಾಮದಾಸ್ ಕಟೀಲ್, ಸುಜಿತ್ ಪ್ರತಾಪ್ ಮಂಗಲ್ಪಾಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ