ಭೈರಪ್ಪ ಸ್ಫೂರ್ತಿಯ ಸಾಹಿತ್ಯ ಬೆಳವಣಿಗೆ ಆಶಯ: ಲಿಟ್‌ಫೆಸ್ಟ್‌ಗೆ ತೆರೆ

KannadaprabhaNewsNetwork |  
Published : Jan 13, 2026, 03:30 AM IST
ಲಿಟ್‌ಫೆಸ್ಟ್‌ನಲ್ಲಿ ಕೈನಿಂದ ಗೊಂಬೆ ಪ್ರದರ್ಶನ  | Kannada Prabha

ಸಾರಾಂಶ

ಸರಸ್ವತಿ ಸನ್ಮಾನ್‌ ಪುರಸ್ಕೃತ, ಗತಿಸಿದ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರ ಸ್ಫೂರ್ತಿಯ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯದ ಬಗ್ಗೆ ಈ ಬಾರಿಯ ‘ಮಂಗಳೂರು ಲಿಟ್‌ಫೆಸ್ಟ್‌-2026’ ಹೊಸ ದಿಕ್ಸೂಚಿಯ ನಿರೀಕ್ಷೆ ತೆರೆದಿಟ್ಟಿತು.

ಮಂಗಳೂರು: ಸರಸ್ವತಿ ಸನ್ಮಾನ್‌ ಪುರಸ್ಕೃತ, ಗತಿಸಿದ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರ ಸ್ಫೂರ್ತಿಯ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯದ ಬಗ್ಗೆ ಈ ಬಾರಿಯ ‘ಮಂಗಳೂರು ಲಿಟ್‌ಫೆಸ್ಟ್‌-2026’ ಹೊಸ ದಿಕ್ಸೂಚಿಯ ನಿರೀಕ್ಷೆ ತೆರೆದಿಟ್ಟಿತು.

ಮಂಗಳೂರಿನ ಡಾ.ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ಲಿಟ್‌ಫೆಸ್ಟ್‌ನಲ್ಲಿ ಡಾ.ಎಸ್.ಎಲ್‌.ಭೈರಪ್ಪರ ಕುರಿತು ಏಳು ಅವಧಿಯನ್ನು ಮೀಸಲಿರಿಸಲಾಯಿತು. ಈ ಅವಧಿಗಳಲ್ಲಿ ಭೈರಪ್ಪರ ಸಾಹಿತ್ಯ ಅನುವಾದ, ರಾಜನೀತಿ ಪಾತ್ರ, ಲೋಕಪ್ರಜ್ಞೆಯ ಪಾರಮ್ಯ, ಕಾದಂಬರಿಗಳಲ್ಲಿ ಸಾಮಾಜಿಕ ಒಳನೋಟ ಇತ್ಯಾದಿ ವಿಚಾರ ಮಂಡನೆ ವೇಳೆ ಹಿರಿಯ ಚಿತ್ರಕಾರ ಮಹೇಂದ್ರ ಮತ್ತು ಬಿ.ಎನ್‌.ಆಚಾರ್ಯ ಕುಂಚಗಳಲ್ಲಿ ಕಲ್ಪನೆಯ ಚಿತ್ರಲೇಖ ಸೃಷ್ಟಿಸಿ ಗೋಷ್ಠಿಗೆ ಹೆಚ್ಚಿನ ಗಂಭೀರ್ಯತೆ ಮೂಡಿಸಲಾಯಿತು. ಸುಮಾರು ಆರು ಚಿತ್ರಗಳನ್ನು ರಚಿಸಿ, ಅದನ್ನು ಲಿಟ್‌ಫೆಸ್ಟ್‌ನ ಕೊನೆಯಲ್ಲಿ ಅನಾವರಣಗೊಳಿಸಲಾಯಿತು.ಭೈರಪ್ಪ ಹಾದಿಯಲ್ಲಿ ಸಾಹಿತ್ಯ:

ಲಿಟ್‌ಫೆಸ್ಟ್‌ನ ಸಮಾರೋಪದಲ್ಲಿ ಭೈರಪ್ಪ ದೃಷ್ಟಿಕೋನದ ಸಾಹಿತ್ಯ ರಚನೆ ಸಾಧ್ಯತೆ ಕುರಿತು ವಿಷಯ ಮಂಡಿಸಿದ ಶತಾವಧಾನಿ ಆರ್‌.ಗಣೇಶ್‌, ಡಾ.ಭೈರಪ್ಪರಂತೆ ಎಲ್ಲ ಭಾಷೆಯನ್ನು ಬಲ್ಲ ಕನ್ನಡದ ಮತ್ತೊಬ್ಬ ಲೇಖಕರು ಇಲ್ಲ. ಅವರು ರಚಿಸಿದಂಥ ಸಾಹಿತ್ಯ ರಚನೆಯಾದರೆ ಅದು ಇಡೀ ಭಾರತಕ್ಕೆ ಅನ್ವಯವಾಗುವಂತೆ ಇರಬಲ್ಲದು ಎಂದರು.

ಡಾ.ಭೈರಪ್ಪ ಅವರು ಸಾಹಿತ್ಯ ರಚನೆ ವೇಳೆ ಯಾವುದೇ ಓದುಗರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಸಾಹಿತ್ಯ ರಚನೆಗೆ ಭವ್ಯತೆ, ಉದಾತ್ತತೆ, ಅಧ್ಯಯನ ಇರಬೇಕು. ಗದ್ಯ ಬರೆಯುವವರು ಕವಿತೆ, ಕವಿತೆ ಬರೆಯುವವರು ಗದ್ಯ ಓದುವುದಿಲ್ಲ. ಹೀಗಾದಲ್ಲಿ ಮಾತ್ರ ಮುಂದಿನ ಸಾಹಿತ್ಯ ಭೈರಪ್ಪನವರ ಹಾದಿಯಲ್ಲಿ ಬೆಳಕು ಕಾಣಬಹುದು ಎಂಬ ಆಶಯವನ್ನು ಡಾ.ಆರ್‌.ಗಣೇಶ್‌ ವ್ಯಕ್ತಪಡಿಸಿದರು. ಡಾ.ಜಿ.ಬಿ.ಹರೀಶ್‌ ಸಂವಾದ ನಡೆಸಿ, ಎಷ್ಟೇ ಆಧುನಿಕತೆಯ ಗಾಳಿ ಬೀಸಿದರೂ ಮತ್ತೆ ಹಳೆಯ ಸಾಹಿತ್ಯವೇ ಮೆರೆಯುತ್ತದೆ. ಲೇಖಕರಿಗೆ ಬಹುಭಾಷಾ ತಜ್ಞತೆ, ಕಲಾ ಪ್ರೀತಿ ಬರಬೇಕು. ಪ್ರಸ್ತುತ ದಿನಗಳಲ್ಲಿ ಸಾಹಿತ್ಯದಲ್ಲಿ ವಿಮರ್ಶೆಯೇ ಜಾಸ್ತಿಯಾಗಿ ಸಹೃದಯತೆ ಹೊರಟುಹೋಗಿದೆ. ಇದರಿಂದಾಗಿ ಹೊಸದಾಗಿ ಒಳ್ಳೆಯ ಸಾಹಿತ್ಯದ ಕೊರತೆ ಕಾಡತೊಡಗಿದೆ. ವಿಶ್ವಸಂಸ್ಕೃತಿಯ ಶ್ರೇಷ್ಠ ಕೃತಿಗಳನ್ನು ಅರಗಿಸಿಕೊಂಡು ಸಾಹಿತ್ಯ ರಚನೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಭಾರತ್‌ ಫೌಂಡೇಷನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಸ್ಮರಣಿಕೆ ನೀಡಿದರು.

ವಿಶೇಷ ಆಯೋಜನೆಯ ಮೂರು ಗೋಷ್ಠಿ

ಈ ಬಾರಿಯ ಲಿಟ್‌ಫೆಸ್ಟ್‌ನಲ್ಲಿ ಎರಡನೇ ದಿನ ಭಾನುವಾರ ಮೂರು ಗೋಷ್ಠಿಗಳು ವಿಶೇಷವಾಗಿ ಆಯೋಜನೆಗೊಂಡಿತ್ತು. ಚಿಕ್ಕ ಮಕ್ಕಳನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಮಂಗಳೂರಿನ ಸಂಸ್ಕಾರ ಭಾರತಿ ತಂಡ ಆಯೋಜಿಸಿದ ಚಿಣ್ಣರ ಅಂಗಳ ಎಂಬ ವಿಶಿಷ್ಟ ಕಾರ್ಯಕ್ರಮ ಹರಟೆ ಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯಿತು. ಚಿಣ್ಣರ ಅಂಗಳಲ್ಲಿ ಚಿಣ್ಣರ ಕಲರವ ನಡುವೆ ಸಂಸ್ಕೃತಿ ಪರಂಪರೆಯನ್ನು ನೆನಪಿಸುವ ಕಾರ್ಯವೂ ನಡೆಯಿತು.

ಕುಮಾರವ್ಯಾಸ ಭಾರತದ ವಾಚನ-ವ್ಯಾಖ್ಯಾನ ಈ ಬಾರಿಯ ಲಿಟ್‌ಫೆಸ್ಟ್‌ನ ಹರಟೆಕಟ್ಟೆಯಲ್ಲಿ ಪ್ರಸ್ತುತಗೊಂಡ ಪ್ರಮುಖ ಅಂಶ. ಪಿಲಿಕಾರನ ಕಥಾನಾಯಕ ಶ್ರೀಕೃಷ್ಣನ ಕುರಿತು ಸಮುದ್ಯತಾ ಮತ್ತೂರು, ಪ್ರಸಾದ್‌ ಭಾರದ್ವಾಜ್‌ ವಾಚನ ಮಾಡಿದರೆ, ಡಾ.ಪಾದೇಕಲ್ಲು ವಿಷ್ಣು ಭಟ್‌ ವ್ಯಾಖ್ಯಾನಿಸಿದರು.

ಕೊಡವ ಭಾಷೆ, ಭೂಮಿ ಮತ್ತು ಬುದುಕು ಬಗ್ಗೆ ಡಾ.ರೇವತಿ, ನಾಗೇಶ್‌ ವಕ್ತಾರರಾಗಿದ್ದರೆ, ಡಾ.ಕಿಶೋರ್‌ ಕುಮಾರ್‌ ರೈ ಸಮನ್ವಯಕಾರರಾಗಿದ್ದರು. ಹರಟೆಕಟ್ಟೆಯ ಕೊನೆಯ ಅವಧಿಯಲ್ಲಿ ಉಜ್ವಲ ಕೃಷ್ಣರಾವ್‌ ಏರ್ಪಡಿಸಿದ ಕೈನಿಂದ ಬೊಂಬೆ ಆಟ ಪ್ರದರ್ಶನ ಕಲೆ ಲಿಟ್‌ಫೆಸ್ಟ್‌ಗೆ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌