ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮಳೆಗಾಲದಲ್ಲಿ ಉಂಟಾದ ಹಾನಿಗೆ ಪರಿಹಾರ ಕಾಮಗಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನನ್ನ ಶ್ರಮ ಇದೆ. ಆದರೆ ಕಾಂಗ್ರೆಸ್‌ನ ಕೆಲವು ನಾಯಕರು ತಾವೇ ಅನುದಾನ ತಂದಿರುವುದಾಗಿ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಉಂಟಾದ ಅಪಾರ ಹಾನಿಯ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತಂದು ರಾಜ್ಯ ವಿಪತ್ತು ಉಪಶಮನ ನಿಧಿಯಡಿ ತುರ್ತು ಕಾಮಗಾರಿ ನಡೆಸುವಂತೆ ಕೋರಿಕೆ ಸಲ್ಲಿಸಿದ್ದೆ. ಅಲ್ಲದೆ, 2025-26ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳನ್ನು ಕೂಡಲೆ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದೆ. ಅದರಂತೆ ಜಿಲ್ಲಾಧಿಕಾರಿ ಫೆ.16ರಂದು ತಮ್ಮ ಅಧಿಕೃತ ಜ್ಞಾಪನ ಪತ್ರದಲ್ಲಿ ‘ಮಾನ್ಯ ಶಾಸಕರು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರರವರ ಪತ್ರ ಸಂಖ್ಯೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ 28 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಧಿಕೃತ ಆದೇಶ ಹೊರಡಿಸಿದ್ದರು. ಇದೀಗ ತಿಂಗಳ ನಂತರ ಕಾಂಗ್ರೆಸ್‌ನ ಐವನ್ ಡಿಸೋಜ ಅವರು ಕ್ಷೇತ್ರದ ವಿವಿಧ ಕಡೆ ತೆರಳಿ, 10 ಕೋಟಿ ರು. ಅನುದಾನ ತಂದಿದ್ದೇವೆ, ಬೇಗ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳುತ್ತಿದ್ದಾರೆ. ಮಳೆ ನಿಂತು ಹೋದ ಮೇಲೆ ಕೊಡೆ ಏರಿಸುವ ಕೆಲಸ ಮಾಡಿದ್ದಾರೆ ಎಂದು ಕಾಮತ್ ಟೀಕಿಸಿದರು.ಪರಿಹಾರ ಕಾಮಗಾರಿ ಎಲ್ಲಿ ನಡೆಯಬೇಕು ಎಂಬುದನ್ನು ಜನರಿಂದ ಆಯ್ಕೆಯಾದ ಸ್ಥಳೀಯ ಜನಪ್ರತಿನಿಧಿಗಳು- ಜಿಲ್ಲಾಧಿಕಾರಿ ಸಮನ್ವಯತೆಯ ಮೂಲಕ ನಿರ್ಧಾರ ಮಾಡಲಾಗುತ್ತದೆ. ಹೀಗಿರುವಾಗ ಎಲ್ಲವೂ ನನ್ನಿಂದಲೇ ಆದದ್ದು ಎಂದು ಸ್ವಯಂ ಶಹಬ್ಬಾಶ್ ಗಿರಿ ಪಡೆದುಕೊಳ್ಳುವುದು ಎಷ್ಟುಸರಿ? ಐವನ್ ಡಿಸೋಜ ಅವರಿಗೆ ಸಾಧ್ಯವಿದ್ದರೆ ನಗರಕ್ಕೆ ಹೊಸ ಯೋಜನೆ, ವಿಶೇಷ ಅನುದಾನಗಳನ್ನು ತರಿಸಿಕೊಳ್ಳಲಿ ಎಂದು ಸವಾಲು ಹಾಕಿದರು.ಆಶಾ ಕಾರ್ಯಕರ್ತೆಯರಿಗೆ ಅನುದಾನ: ಹಲವು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಪೈಕಿ ಸುಮಾರು 163 ಜನರನ್ನು ಕೆಲಸದಿಂದ ತೆಗೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ. 15- 20 ವರ್ಷಗಳ ಕೆಲಸ ಮಾಡಿದ ಆಶಾ ಕಾರ್ಯಕರ್ತರನ್ನು ಏಕಾಏಕಿ ತೆಗೆದು ಹಾಕಿದರೆ ಅವರು ಎಲ್ಲಿ ಹೋಗಬೇಕು? ಅವರ ಜೀವನ ನಿರ್ವಹಣೆ ಹೇಗೆ? ಕೊರೋನಾ ಕಾಲದಲ್ಲಿ ಜೀವದ ಹಂಗು ತೊರೆದು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಬದುಕನ್ನು ಬೀದಿಗೆ ಹಾಕಬಾರದು ಎಂದು ಶಾಸಕ ಕಾಮತ್ ಒತ್ತಾಯಿಸಿದರು.
ವೈದ್ಯಾಧಿಕಾರಿಗಳ ಮುಷ್ಕರ: ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯ ಸಂಘಟನೆಗಳು ಬೇಡಿಕೆ ಈಡೇರಿಕೆಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿ ಮುಷ್ಕರ ನಡೆಸಲು ಮುಂದಾಗಿವೆ. ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎದ್ದು ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.ಮಾಜಿ ಮೇಯರ್‌ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಎಂ., ಪ್ರಮುಖರಾದ ಮಂಗಳಾ ಆಚಾರ್, ಸುರೇಖಾ ರಾವ್, ಸುರೇಖಾ ಎಂ. ಎಸ್. ಇದ್ದರು.