ಮಂಗಳೂರು: ನಾಳೆ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’

KannadaprabhaNewsNetwork | Updated : Oct 28 2024, 12:47 AM IST

ಸಾರಾಂಶ

ಮಂಗಳೂರಿನ ಉಳ್ಳಾಲ ಹಾಗೂ ಪುತ್ತೂರಿನಲ್ಲಿ ಆಯುಷ್‌ ಆಸ್ಪತ್ರೆ ತೆರೆಯಲು ಸಿದ್ಧತೆ ನಡೆಯುತ್ತಿದೆ. ಉಳ್ಳಾಲದಲ್ಲಿ ಜಾಗ ಗುರುತಿಸಲಾಗಿದ್ದು, ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಇಕ್ಬಾಲ್‌ ತಿಳಿಸಿದರು.

(ಇಂಗ್ಲಿಷ್‌ ಪದಗಳಿವೆ)

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಆಯುಷ್‌ ಇಲಾಖೆ ಆಶ್ರಯದಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-2024 ಅ.29ರಂದು ಮಂಗಳೂರಿನ ವೆನ್ಲಾಕ್‌ ಆಯುಷ್‌ ಸಂಯುಕ್ತ ಆಸ್ಪತ್ರೆಯಲ್ಲಿ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಉಪಸ್ಥಿತಿಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ವಿಚಾರದಲ್ಲಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ಪಿ. ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮಹಮ್ಮದ್‌ ಇಕ್ಬಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಲ್‌ನಲ್ಲಿ ಸೆಲ್ಫಿ ಪಾಯಿಂಟ್‌:

ಮಂಗಳೂರಿನ ಸಿಟಿ ಸೆಂಟರ್‌ ಮಾಲ್‌ನಲ್ಲಿ ಅ.29ರಿಂದ ಐದು ದಿನಗಳ ಕಾಲ ಆಯುರ್ವೇದ ದಿನಾಚರಣೆ ಬಗ್ಗೆ ಸೆಲ್ಫಿ ಪಾಯಿಂಟ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಸಾರ್ವಜನಿಕರು ಸೆಲ್ಫಿ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆದು ಫೋಟೋವನ್ನು ayurvedaday.in ಲಿಂಕ್‌ನಲ್ಲಿ ಅಪ್‌ಲೋಡ್‌ ಮಾಡಿ ದೇಶೀಯ ಔಷಧ ಪದ್ಧತಿಯನ್ನು ಜನಪ್ರಿಯಗೊಳಿಸುವಲ್ಲಿ ಸಹಕಾರ ನೀಡಬೇಕು ಎಂದರು.

ಆಯುಷ್‌ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 800 ಆಯುಷ್‌ ಚಿಕಿತ್ಸಾಲಯಗಳಿದ್ದು, ಅವುಗಳಲ್ಲಿ ಕೆಲವು ಖಾಸಗಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ, ಆಯುರ್ವೇದ ಪಾನೀಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ದೀಪಾವಳಿ ಮುನ್ನಾ ದಿನ ಆಯುಷ್‌ ದಿನ ಆಚರಿಸಲಾಗುತ್ತಿದೆ ಎಂದರು.

ಆಯುರ್ವೇದ ದಿನಾಚರಣೆ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕ್ಯಾನ್ಸರ್‌ಗೆ ಸಂಬಂಧಿಸಿ ಆಯುಷ್‌ ವಿಭಾಗದಿಂದ ಪ್ರತ್ಯೇಕ ಕೋರ್ಸ್‌ಗೂ ಸಿದ್ಧತೆ ನಡೆಯುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ನಾಯಕ್‌ ಹೇಳಿದರು.

ಆಯುರ್ವೇದ ವೈದ್ಯರಾದ ಡಾ. ಸಚಿನ್‌ ನಡ್ಕ, ಡಾ.ಕೃಷ್ಣ ಗೋಖಲೆ, ಡಾ. ಆಶಾಜ್ಯೋತಿ ರೈ, ಡಾ.ಜನಾರ್ದನ ಹೆಬ್ಬಾರ್‌, ಡಾ.ದೇವದಾಸ್‌ ಮತ್ತಿತರರಿದ್ದರು.

ಉಳ್ಳಾಲ, ಪುತ್ತೂರಿಗೆ ಆಯುಷ್‌ ಆಸ್ಪತ್ರೆ ಮಂಜೂರು

ಮಂಗಳೂರಿನ ಉಳ್ಳಾಲ ಹಾಗೂ ಪುತ್ತೂರಿನಲ್ಲಿ ಆಯುಷ್‌ ಆಸ್ಪತ್ರೆ ತೆರೆಯಲು ಸಿದ್ಧತೆ ನಡೆಯುತ್ತಿದೆ. ಉಳ್ಳಾಲದಲ್ಲಿ ಜಾಗ ಗುರುತಿಸಲಾಗಿದ್ದು, ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಇಕ್ಬಾಲ್‌ ತಿಳಿಸಿದರು.

ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮದಡಿ ನೋಂದಣಿಯಾಗದೆ ಕಾರ್ಯನಿರ್ವಹಿಸುವ ವೈದ್ಯರ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಡಾ.ಇಕ್ಬಾಲ್‌ ಉತ್ತರಿಸಿದರು.

Share this article