ಮಂಗಳೂರು: ಗಾತ್ರದಲ್ಲಿ ಪುಟ್ಟದಾಗಿರುವ ಈ ಗಣಪನ ವಿಗ್ರಹ ಮಂಗಳೂರಿನಲ್ಲಿ ತಯಾರಾದರೂ ಪೂಜೆಗೊಳ್ಳುವುದು ದೂರದ ಅಮೆರಿಕದಲ್ಲಿ. ಇದೇ ಈತನ ವಿಶೇಷತೆ.
ಮಂಗಳೂರಿನ ನಂಟು ಇರುವ ಶೆರ್ಲೇಕರ್ ಫ್ಯಾಮಿಲಿ ಅಮೆರಿಕದಲ್ಲಿ ಉದ್ಯಮ ನಡೆಸುತ್ತಿದೆ. ಗಣೇಶ ಚತುರ್ಥಿ ಸಂದರ್ಭ ಈ ಕುಟುಂಬ ಅಮೆರಿಕದಲ್ಲೇ ಗಣೇಶನ ಮೂರ್ತಿ ಇರಿಸಿ ಪೂಜೆ ಮಾಡುತ್ತದೆ. ಆದರೆ ಅಲ್ಲಿ ಪೂಜೆಗೊಳ್ಳುವ ಗಣಪನ ವಿಗ್ರಹ ಮಾತ್ರ ಕಳೆದ 28 ವರ್ಷಗಳಿಂದ ಮಣ್ಣಗುಡ್ಡ ಮೋಹನ್ ರಾವ್ ಕುಟುಂಬದಿಂದಲೇ ತಯಾರಾಗುತ್ತದೆ ಎನ್ನುವುದು ಗಮನಾರ್ಹ.
ಅಮೆರಿಕಗೆ ರವಾನೆಯಾಗುವ ಕಾರಣ ಸುಮಾರು ಎರಡು ಅಡಿ ಎತ್ತರದ ಗಣೇಶನ ವಿಗ್ರಹ ತಯಾರಿಸಲಾಗುತ್ತದೆ. ಪೂಜೆಗೊಳ್ಳುವ ಮೂರ್ತಿ ಭಗ್ನ ಆಗಬಾರದು ಎನ್ನುವ ಕಾರಣಕ್ಕೆ ಈ ಗಣಪ ಕ್ಯಾಬಿನ್ ಬ್ಯಾಗ್‌ನಲ್ಲಿ ಕುಳ್ಳಿರಿಸಿ ಅಮೆರಿಕಾಗೆ ತೆಗೆದುಕೊಂಡ ಹೋಗಲಾಗುತ್ತದೆ. ಮೂರು ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ವಿಮಾನ ಏರಿ ಈ ಗಣಪ ಅಮೆರಿಕಾದತ್ತ ಹಾರಿದ್ದಾನೆ. ಈತ ಆ.27ರಂದು ಶೆರ್ಲೇಕರ್ ಫ್ಯಾಮಿಲಿಯಿಂದ ಕ್ಯಾಲಿಫೋರ್ನಿಯಾದಲ್ಲಿ ಪೂಜೆಗೊಳ್ಳಲಿದ್ದಾನೆ. ಶೆರ್ಲೇಕರ್ ಫ್ಯಾಮಿಲಿ ಹಾಗೂ ದಿ.ಮೋಹನ್ ರಾವ್ ಕುಟುಂಬದ ಈ ಬಂಧುತ್ವ ತಲೆಮಾರು ಕಳೆದರೂ ಹೀಗೆಯೇ ಮುಂದುವರಿದಿದೆ.