‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ!

KannadaprabhaNewsNetwork |  
Published : Dec 15, 2025, 03:00 AM IST
ಡ್ರಗ್ಸ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಬೆಂಗಳೂರಿನಿಂದಾಚೆಗೆ ಮಾದಕ ದ್ರವ್ಯದ ಮಾರಕ ಜಾಲ ದೊಡ್ಡಮಟ್ಟದಲ್ಲಿ ವಿಸ್ತರಿಸಿರುವುದು ಮಂಗಳೂರಿನಲ್ಲಿ. ಶಿಕ್ಷಣಕ್ಕೆ ಹೆಸರಾಗಿರುವ ಮಂಗಳೂರು, ಇನ್ನೊಂದು ಮಗ್ಗುಲಲ್ಲಿ ಡ್ರಗ್ಸ್‌ ಮಾರುಕಟ್ಟೆಯಾಗಿಯೂ ಕುಖ್ಯಾತಿ ಗಳಿಸಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಬೆಂಗಳೂರಿನಿಂದಾಚೆಗೆ ಮಾದಕ ದ್ರವ್ಯದ ಮಾರಕ ಜಾಲ ದೊಡ್ಡಮಟ್ಟದಲ್ಲಿ ವಿಸ್ತರಿಸಿರುವುದು ಮಂಗಳೂರಿನಲ್ಲಿ. ಶಿಕ್ಷಣಕ್ಕೆ ಹೆಸರಾಗಿರುವ ಮಂಗಳೂರು, ಇನ್ನೊಂದು ಮಗ್ಗುಲಲ್ಲಿ ಡ್ರಗ್ಸ್‌ ಮಾರುಕಟ್ಟೆಯಾಗಿಯೂ ಕುಖ್ಯಾತಿ ಗಳಿಸಿದೆ!.

ಆದರೆ, ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯ ಇಡೀ ಪೊಲೀಸ್‌ ಇಲಾಖೆ ಡ್ರಗ್ಸ್‌ ವಿರುದ್ಧ ಆಖಾಡಕ್ಕಿಳಿದು ನೇರ ಸಮರಕ್ಕೆ ಧುಮುಕಿದ್ದು, ಡ್ರಗ್ಸ್‌ ಪೆಡ್ಲರ್‌ಗಳಲ್ಲಿ ನಡುಕ ಹುಟ್ಟಿಸಿದೆ. ಈ ಕಾರಣದಿಂದ ದೊಡ್ಡಮಟ್ಟದ ಧನಾತ್ಮಕ ಬದಲಾವಣೆ ಜಿಲ್ಲೆಯಲ್ಲಿ ಕಂಡು ಬಂದಿದೆ. ಆದರೆ, ಕಳೆದೊಂದು ದಶಕದಿಂದ ವಿಸ್ತಾರವಾಗಿ ಚಾಚಿಕೊಂಡಿರುವ ಮಾದಕ ದ್ರವ್ಯದ ಕಂಬಂಧ ಬಾಹುಗಳ ದಮನವೇ ಬಹುದೊಡ್ಡ ಸವಾಲಾಗಿದೆ.

‘ಎಜ್ಯುಕೇಶನ್‌ ಹಬ್‌’ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಸೇರಿದಂತೆ ಯುವ ಸಮೂಹ ಡ್ರಗ್ಸ್‌ ಮಾರುಕಟ್ಟೆಯ ಮುಖ್ಯ ಟಾರ್ಗೆಟ್‌. ನೆಲ, ಜಲ, ವಾಯು ಸಂಪರ್ಕ ಎಲ್ಲವನ್ನೂ ಜಿಲ್ಲೆ ಹೊಂದಿರುವುದರಿಂದ ಡ್ರಗ್ಸ್‌ ಕಾಳದಂಧೆಗೆ ಅನುಕೂಲಕರವಾಗಿ ಪರಿಣಮಿಸಿದೆ.

ಕೇರಳದಿಂದ ಅವ್ಯಾಹತ:

ದ.ಕ.ಜಿಲ್ಲೆಯಿಂದ ಹತ್ತಕ್ಕೂ ಅಧಿಕ ಗಡಿ ರಸ್ತೆಗಳು ಹಾಗೂ ರೈಲಿನ ಮೂಲಕ ಸಂಪರ್ಕ ಹೊಂದಿರುವ ಕೇರಳದಿಂದ ಅವ್ಯಾಹತವಾಗಿ ಡ್ರಗ್ಸ್‌ ಸರಬರಾಜು ಆಗುತ್ತಿದೆ. ಮಂಗಳೂರಲ್ಲಿ ಶಿಕ್ಷಣ ಪಡೆಯುತ್ತಿರುವ ಕೇರಳ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಈ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡುವ ಮೂಲಕ ವ್ಯಸನಿಗಳ ಜಾಲವನ್ನು ಸ್ಥಳೀಯ ಮಟ್ಟದಲ್ಲೂ ವಿಸ್ತಾರಗೊಳಿಸಲಾಗುತ್ತಿದೆ. ಇತ್ತೀಚೆಗೆ ನಡೆಸಿದ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಶೇ.20ರಷ್ಟು ಕಾಲೇಜು ವಿದ್ಯಾರ್ಥಿಗಳು ಡ್ರಗ್‌ ಸೇವನೆ ಮಾಡಿರುವುದು ಖಚಿತವಾಗಿದೆ.

‘‘ಧನದಾಸೆಯಿಂದ ವಿದ್ಯಾರ್ಥಿಗಳಲ್ಲೂ ಪೆಡ್ಲರ್‌ಗಳು ಹುಟ್ಟುತ್ತಿದ್ದಾರೆ. ಸ್ಥಳೀಯ ಯುವಕರೂ ಇದರ ಉರುಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಇಂಥ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ’’ ಎನ್ನುತ್ತಾರೆ ಶಿಕ್ಷಣ ಸಂಸ್ಥೆಯೊಂದರ ಪ್ರಾಂಶುಪಾಲರು.

ವಿದೇಶ, ಮುಂಬೈ, ದೆಹಲಿಯಿಂದಲೂ ಪೂರೈಕೆ:

ಕಳೆದ ಮಾರ್ಚ್‌ನಲ್ಲಿ ಮಂಗಳೂರು ಪೊಲೀಸರು ರಾಜ್ಯದಲ್ಲೇ ಅತಿದೊಡ್ಡ ಡ್ರಗ್ಸ್‌ ಪ್ರಕರಣವನ್ನು ಭೇದಿಸಿ 75 ಕೋಟಿ ರು.ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡು ದ.ಆಫ್ರಿಕಾದ ಇಬ್ಬರು ಮಹಿಳೆಯರನ್ನು ಬೆಂಗಳೂರಲ್ಲಿ ಬಂಧಿಸಿದ್ದರು. ಆರೋಪಿಗಳು ದೆಹಲಿಯಿಂದ ವಿಮಾನದ ಮೂಲಕ ನಿರಂತರವಾಗಿ ಡ್ರಗ್ಸ್‌ ಸಪ್ಲೆ ಮಾಡುತ್ತಿದ್ದುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆಫ್ರಿಕಾ, ನೈಜೀರಿಯಾ ಸೇರಿದಂತೆ ಅನೇಕ ವಿದೇಶಿಗರು ಸ್ಥಳೀಯ ಪೆಡ್ಲರ್‌ಗಳ ಮೂಲಕ ಜಾಲ ವಿಸ್ತರಣೆ ಮಾಡುತ್ತಿದ್ದಾರೆ. ಮುಂಬೈನಿಂದಲೂ ಮಂಗಳೂರಿಗೆ ಸರಬರಾಜು ಆಗುತ್ತಿದೆ. ಆದರೆ, ಜಾಲದ ಹಿಂದಿನ ಕಾಣದ ಕೈಗಳು ಮಾತ್ರ ನಿಗೂಢವಾಗಿಯೇ ಉಳಿದಿವೆ.

ಇತ್ತೀಚಿನ ದಿನಗಳಲ್ಲಿ ಡ್ರಗ್ಸ್‌ ವ್ಯಸನಕ್ಕೆ ಹರೆಯದ ಹೆಣ್ಮಕ್ಕಳೂ ಬಲಿಯಾಗುತ್ತಿರುವುದು ಆತಂಕ ಹುಟ್ಟಿಸಿದೆ. ಪಬ್‌, ಕ್ಲಬ್‌, ಪಾರ್ಟಿಗಳ ಹೆಸರಿನಲ್ಲಿ ಹೆಣ್ಮಕ್ಕಳು ನಶೆಗೆ ಸಿಲುಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಸಿಂಹಸ್ವಪ್ನವಾದ ‘ಕುಡ್ಲ’ ಪೊಲೀಸ್‌:

ಡ್ರಗ್ಸ್‌ನಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಹಾಗೂ ದ.ಕ. ಜಿಲ್ಲಾ ಎಸ್ಪಿ ಡಾ। ಅರುಣ್‌, ಇದನ್ನೇ ಮುಖ್ಯ ಟಾರ್ಗೆಟ್‌ ಮಾಡಿ ಪೆಡ್ಲರ್‌ಗಳ ಬೇಟೆಯಲ್ಲಿ ತೊಡಗಿದ್ದಾರೆ. ಈ ಇಬ್ಬರು ಅಧಿಕಾರಿಗಳ ಕಾರ್ಯದಕ್ಷತೆಯಿಂದ ‘ನಶೆಯ ಮಂಗಳೂರು’ ನಶಾ ಮುಕ್ತವಾಗುವತ್ತ ಆಶಾದಾಯಕ ಹೆಜ್ಜೆ ಹಾಕುತ್ತಿದೆ. ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 2024ರಲ್ಲಿ 160 ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದರೆ, ಈ ವರ್ಷ ಬಂಧಿತ ಪೆಡ್ಲರ್‌ಗಳ ಸಂಖ್ಯೆ 212ಕ್ಕೆ ಏರಿದೆ. ಇವರಲ್ಲಿ ಶೇ.80ರಷ್ಟು ಮಂದಿ ಇನ್ನೂ ಜೈಲಲ್ಲಿದ್ದಾರೆ. ಪೆಡ್ಲರ್‌ಗಳ ಹೆಡೆಮುರಿ ಕಟ್ಟುತ್ತಿರುವುದರಿಂದ 2024ರಲ್ಲಿ 1,244 ಇದ್ದ ಡ್ರಗ್ಸ್‌ ಸೇವನೆಯ ಪ್ರಕರಣಗಳು ಈ ವರ್ಷ 661ಕ್ಕೆ ಇಳಿದಿವೆ. ಪೊಲೀಸ್‌ ಇಲಾಖೆಯ ಜತೆ ಸಾರ್ವಜನಿಕರೂ ಡ್ರಗ್ಸ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ.

---

ಡ್ರಗ್ಸ್‌ ಜಾಲ ಮಾಹಿತಿಗೆ

ಕ್ಯೂಆರ್‌ಕೋಡ್‌ ವ್ಯವಸ್ಥೆ

ಡ್ರಗ್ಸ್‌ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ನಿಗಾ ಇರಿಸಲಾಗಿದೆ. ಮುಖ್ಯವಾಗಿ ಸ್ಥಳೀಯ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತಿದೆ. ಡ್ರಗ್ಸ್‌ ಜಾಲದ ಮಾಹಿತಿ ನೀಡಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕ್ಯೂಆರ್‌ ಕೋಡ್‌ಗಳನ್ನು ನೀಡಲಾಗುತ್ತಿದ್ದು, ಈ ಮಾಹಿತಿಯಿಂದಲೇ ಶೇ.25ರಷ್ಟು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಹಳೆ ವ್ಯಸನಿಗಳು ಮತ್ತು ಪೆಡ್ಲರ್‌ಗಳ ಮೇಲೆ ಪ್ರತಿ ಪೊಲೀಸ್‌ ಠಾಣೆಯಲ್ಲೂ ನಿಗಾ ವಹಿಸಲಾಗಿದೆ. ಕಾಲಕಾಲಕ್ಕೆ ವ್ಯಸನಿಗಳ ಡ್ರಗ್ಸ್‌ ಪರೀಕ್ಷೆ ನಡೆಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಡ್ರಗ್ಸ್‌ ಪರೀಕ್ಷೆಯನ್ನು ಕೂಡ ನಿಯಮಿತವಾಗಿ ನಡೆಸುತ್ತಿದ್ದೇವೆ. ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ನಿರಂತರವಾಗಿ ಇದು ಮುಂದುವರಿಯಲಿದೆ.

-ಸುಧೀರ್‌ ಕುಮಾರ್‌ ರೆಡ್ಡಿ, ಮಂಗಳೂರು ನಗರ ಪೊಲೀಸ್‌ ಆಯುಕ್ತ.

ಬಾಕ್ಸ್‌:ವಶಪಡಿಸಿಕೊಂಡ ಡ್ರಗ್ಸ್‌ ಎಷ್ಟು?:ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಈ ವರ್ಷ ಈವರೆಗೆ 319.335 ಕೆ.ಜಿ.ಗಾಂಜಾ, 1.297 ಎಂಡಿಎಂಎ, 14.4 ಗ್ರಾಮ್‌ ಹೈಡ್ರೋ ವೀಡ್‌ ಗಾಂಜಾ, 21.03 ಗ್ರಾಂ. ಕೊಕೈನ್‌, 186 ಗ್ರಾಂ. ಒಪಿಯಂ, 19.95 ಗ್ರಾಂ. ಮೆಥಾಂಫೆಟಮೈನ್‌, 125.46 ಗ್ರಾಂ. ಚರಸ್‌, 1.319 ಕೆ.ಜಿ. ಭಾಂಗ್‌ ಚಾಕ್ಲೆಟ್‌ ವಶಪಡಿಸಿಕೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ