ಇಂದು ಮಂಗಳೂರು ವಿವಿ 42ನೇ ಘಟಿಕೋತ್ಸವ: ರಾಜ್ಯಪಾಲ, ಉನ್ನತ ಶಿಕ್ಷಣ ಸಚಿವರು ಭಾಗಿ

KannadaprabhaNewsNetwork | Published : Jun 15, 2024 1:05 AM

ಸಾರಾಂಶ

ವಿವಿ ಸಹಕುಲಾಧಿಪತಿ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಆಶಯ ಭಾಷಣ ಮಾಡಲಿದ್ದಾರೆ. ಸಮಾರು ಒಂದು ಗಂಟೆ ಕಾಲ ಸಭಾ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಜೂ.15ರಂದು ಕೊಣಾಜೆ ಮಂಗಳೂರು ವಿವಿ ಆವರಣದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಉದ್ಯಮಿಗಳಾದ ಪ್ರಕಾಶ್‌ ಶೆಟ್ಟಿ, ರೊನಾಲ್ಡ್‌ ಕೊಲಾಸೋ ಹಾಗೂ ಶಿಕ್ಷಣತಜ್ಞ ತುಂಬೆ ಮೊಯ್ದಿನ್‌ ಇವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಪ್ರಕಟಿಸಿದ್ದಾರೆ.

ಮಂಗಳೂರು ವಿವಿ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ನಡೆಯಲಿದ್ದು, 12.15ಕ್ಕೆ ಘಟಿಕೋತ್ಸವ ಆರಂಭವಾಗಲಿದೆ. ವಿವಿ ಕುಲಾಧಿಪತಿ ಆಗಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡುವರು. ದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವಿಭಾಗದ ಮಹಾ ನಿರ್ದೇಶಕ ಪ್ರೊ.ಸಚಿನ್‌ ಚತುರ್ವೇದಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿವಿ ಸಹಕುಲಾಧಿಪತಿ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಆಶಯ ಭಾಷಣ ಮಾಡಲಿದ್ದಾರೆ. ಸಮಾರು ಒಂದು ಗಂಟೆ ಕಾಲ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ 12 ಪ್ರಸ್ತಾವನೆಗಳು ಬಂದಿದ್ದು, ಮೂರು ಹೆಸರುಗಳನ್ನು ಆಯ್ಕೆ ಮಾಡಿ ಕುಲಾಧಿಪತಿಗಳು ನೀಡಿದ್ದಾರೆ ಎಂದು ಅವರು ತಿಳಿಸಿದರು.ವಿಶ್ವವಿದ್ಯಾನಿಲಯಕ್ಕೆ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿರುವ, ಸೇವೆ ನೀಡಿರುವ ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ಗಾಗಿ ಬರುವ ಪ್ರಸ್ತಾವನೆಗಳನ್ನು ಸಿಂಡಿಕೇಟ್‌ ಸಭೆಯಲ್ಲಿ ದಾಖಲೆಯೊಂದಿಗೆ ಇರಿಸಿ ಸಿಂಡಿಕೇಟ್‌ ಸಭೆಯ ನಿರ್ಣಯದ ಪ್ರಕಾರ ಕುಲಾಧಿಪತಿಗಳಿಗೆ ರವಾನಿಸಲಾಗುತ್ತದೆ. ಅವರು ಅಂತಿಮ ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ. ಧರ್ಮ ಸ್ಪಷ್ಟಪಡಿಸಿದರು.

ಕುಲಸಚಿವ ರಾಜುಮೊಗವೀರ, ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಡಾ. ದೇವೇಂದ್ರಪ್ಪ ಇದ್ದರು.

155 ಮಂದಿಗೆ ಪಿಎಚ್‌ಡಿ ಪದವಿ

ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಮಂದಿಗೆ ಪಿಎಚ್‌ಡಿ ಪದವಿ(ಕಲೆ -51. ವಿಜ್ಞಾನ -73. ವಾಣಿಜ್ಯ-26.ಶಿಕ್ಷಣ -05) ಇವರಲ್ಲಿ 60(ಶೇ.38.70) ಮಹಿಳೆಯರು ಮತ್ತು 95(ಶೇ.61.29) ಪುರುಷರು. ಈ ಬಾರಿ 18 ಅಂತಾರಾಷ್ಟ್ರೀಯ ಪುರುಷ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿರುವರು. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು 168 ರ್‍ಯಾಂಕ್‌ ಪ್ರಥಮ ಬ್ಯಾಂಕ್ ಪಡೆದ 72 ಮಂದಿಗೆ ರ್‍ಯಾಂಕ್‌ ಪ್ರಮಾಣ ಪತ್ರ(ಸ್ನಾತಕೋತ್ತರ ಪದವಿ 52 ಮತ್ತು ಪದವಿ 20, ಕಲೆ 31, ವಿಜ್ಞಾನ ಮತ್ತು ತಂತ್ರಜ್ಞಾನ 75, ವಾಣಿಜ್ಯ 41, ಶಿಕ್ಷಣ 21) ನೀಡಲಾಗುತ್ತದೆ.ಮಂಗಳೂರು ವಿಶ್ವವಿದ್ಯಾನಿಲಯ 2022-23ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಹಾಜರಾದ ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಿ ಅಂಶಗಳು.ಒಟ್ಟು 29,465 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 21,319 (ಶೇ.72.35) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 3,277 ವಿದ್ಯಾರ್ಥಿಗಳು ಹಾಜರಾಗಿದ್ದು 3,094 (ಶೇ.94.42) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 26,188 ವಿದ್ಯಾರ್ಥಿಗಳು ಹಾಜರಾಗಿದ್ದು 18.225 (ಶೇ.69.59) ವಿದ್ಯಾರ್ಥಿಗಳು ಉತ್ತೀರ್ಣ. ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದವರಲ್ಲಿ 3,094 2 839(ಶೇ.27.10) ಹುಡುಗರು ಹಾಗೂ 2,255 (ಶೇ.72.90) ಹುಡುಗಿಯರು. ಪದವಿ ಪರೀಕ್ಷೆಯಲ್ಲಿ 18,225 ವಿದ್ಯಾರ್ಥಿಗಳಲ್ಲಿ 6,639(ಶೇ.36.50) ಹುಡುಗರು ಮತ್ತು 11,586(ಶೇ.63.60) ಹುಡುಗಿಯರು. ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 21,319 ವಿದ್ಯಾರ್ಥಿಗಳಲ್ಲಿ 8,097(ಶೇ.38) ಹುಡುಗರು (ಶೇಕಡಾವಾರು ಉತ್ತೀರ್ಣರಾದ ಹುಡುಗರು ಶೇ.65.20) ಮತ್ತು 13,841(ಶೇ.65) ಹುಡುಗಿಯರು (ಶೇಕಡಾವಾರು ಉತ್ತೀರ್ಣರಾದ ಹುಡುಗಿಯರು ಶೇ.81 30).ವಿಶ್ವವಿದ್ಯಾನಿಲಯ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಅನುಕ್ರಮವಾಗಿ ತೇರ್ಗಡೆಯಾದವರು 21.319(ಪಿಎಚ್‌ಡಿ ಹೊರತುಪಡಿಸಿ) ವಿದ್ಯಾರ್ಥಿಗಳಲ್ಲಿ 6,629 (ಶೇ.31) ಉನ್ನತ ಶ್ರೇಣಿ 12,947 (ಶೇ.0.72) ಪ್ರಥಮ ಶ್ರೇಣಿ 1,587 (ಶೇ.7.4) ದ್ವಿತೀಯ ಶ್ರೇಣಿ ಹಾಗೂ ಉಳಿದ 156 (ಶೇ.1) ವಿದ್ಯಾರ್ಥಿಗಳು ತೇರ್ಗಡೆ ಶ್ರೇಣಿ C ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪದವಿ ಪ್ರಮಾಣ ಪತ್ರಕ್ಕೆ ಶುಲ್ಕ ಪಾವತಿಸಿದ ಎಲ್ಲ ಅರ್ಹ ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರಗಳನ್ನು ಕಾಲೇಜು/ ವಿಭಾಗಗಳಿಗೆ ಜೂನ್ ತಿಂಗಳ ಅಂತ್ಯದೊಳಗೆ ಕಳುಹಿಸಿಕೊಡಲಾಗುವುದು.

Share this article