ಪಂಚಾಯ್ತಿ ತೆರಿಗೆಗೂ ಮಂಗಳೂರು ವಿವಿಯಲ್ಲಿ ದುಡ್ಡಿಲ್ಲ! ಹೊರಗುತ್ತಿಗೆ ನೌಕರರಿಗೂ ವೇತನ ನೀಡಲಾಗದ ಸ್ಥಿತಿ

KannadaprabhaNewsNetwork |  
Published : Mar 15, 2025, 01:04 AM ISTUpdated : Mar 15, 2025, 09:42 AM IST
ಮಂಗಳೂರು ವಿಶ್ವವಿದ್ಯಾನಿಲಯ | Kannada Prabha

ಸಾರಾಂಶ

ರಾಜ್ಯದ ಹಳೆಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಗಳೂರು ವಿವಿಯಲ್ಲಿ ಪಿಂಚಣಿಗಾಗಿ ಇಟ್ಟಿದ್ದ ಮೂಲ ನಿಧಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಇಟ್ಟಿದ್ದ ನಿಧಿಯಲ್ಲಿನ ಅನುದಾನವೂ ಖಾಲಿ. ಸ್ಥಳೀಯ ಗ್ರಾಮ ಪಂಚಾಯಿತಿ ತೆರಿಗೆಯನ್ನೂ ಕಟ್ಟಲಾಗದಷ್ಟು ಆರ್ಥಿಕ ಸಂಕಷ್ಟ.  

ಆತ್ಮಭೂಷಣ್‌

 ಮಂಗಳೂರು : ರಾಜ್ಯದ ಹಳೆಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಗಳೂರು ವಿವಿಯಲ್ಲಿ ಪಿಂಚಣಿಗಾಗಿ ಇಟ್ಟಿದ್ದ ಮೂಲ ನಿಧಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಇಟ್ಟಿದ್ದ ನಿಧಿಯಲ್ಲಿನ ಅನುದಾನವೂ ಖಾಲಿ. ಸ್ಥಳೀಯ ಗ್ರಾಮ ಪಂಚಾಯಿತಿ ತೆರಿಗೆಯನ್ನೂ ಕಟ್ಟಲಾಗದಷ್ಟು ಆರ್ಥಿಕ ಸಂಕಷ್ಟ. ಹೊರಗುತ್ತಿಗೆ ನೌಕರರಿಗೂ ವೇತನ ನೀಡಲಾಗದ ಸ್ಥಿತಿ ತಲುಪಿದೆ.

ನಿವೃತ್ತ ನೌಕರರಿಗೆ ಪಿಂಚಣಿ, ಹಾಲಿ ಇರುವ ಹೊರ ಗುತ್ತಿಗೆ ನೌಕರರು, ಅತಿಥಿ ಉಪನ್ಯಾಸಕರಿಗೇ ವೇತನ ನೀಡಲೂ ಆಗದ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಬಂದು ನಿಂತಿರುವ ಮಂಗಳೂರು ವಿವಿಯು ಶೈಕ್ಷಣಿಕವಾಗಿಯೂ ಬೋಧಕರ ನೇಮಕ ಮಾಡಿಕೊಳ್ಳಲಾಗದೆ ಒಂಭತ್ತಕ್ಕೂ ಅಧಿಕ ಕೋರ್ಸ್‌ಗಳನ್ನು ಮುಚ್ಚಿದೆ. 2022ರಿಂದ 2024ರವರೆಗೆ ಕೊಣಾಜೆ ಗ್ರಾಮ ಪಂಚಾಯಿತಿ ನೋಟಿಸ್‌ ನೀಡಿದರೂ ಆದಾಯ ಇಲ್ಲದ ಕಾರಣಕ್ಕೆ 40 ಲಕ್ಷ ರು.ನಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದೆ. ವಿವಿ ನಿರ್ವಹಣೆಗೆ ಅಗತ್ಯ ಆದಾಯ ಕ್ರೋಢೀಕರಿಸಲು ವಿವಿ ಸಭಾಂಗಣವನ್ನೇ ಮದುವೆ ಸಮಾರಂಭಗಳಿಗೆ ಬಾಡಿಗೆ ನೀಡಲಾರಂಭಿಸಿರುವುದು ದಿವಾಳಿ ಹಂತ ತಲುಪಿರುವುದಕ್ಕೆ ಹಿಡಿದ ಕೈಗನ್ನಡಿ.

ತನ್ನ ಸಂಯೋಜನೆಯಲ್ಲಿದ್ದ ಕೊಡಗು ಜಿಲ್ಲೆಯ 26 ಕಾಲೇಜುಗಳನ್ನು ಸೇರಿಸಿ ಹಿಂದಿನ ಸರ್ಕಾರ ಪ್ರತ್ಯೇಕ ವಿವಿ ಸ್ಥಾಪಿಸಿತು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯಿತು. ಇದು ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ವಿವಿಯ ಆಂತರಿಕ ಆದಾಯ ತೀವ್ರವಾಗಿ ಕುಸಿಯುವಂತೆ ಮಾಡಿದೆ. ಯಾವ ಹಂತಕ್ಕೆ ಎಂದರೆ ತನ್ನದೇ ಘಟಕ ಕಾಲೇಜುಗಳನ್ನೂ ಮುಚ್ಚುವ ಸ್ಥಿತಿಗೆ ತಂದು ನಿಲ್ಲಿಸಿದೆ. 

ಇಳಿಕೆಯಾದ ಕಾಲೇಜು, ವಿದ್ಯಾರ್ಥಿಗಳ ಸಂಖ್ಯೆ:

ಮಂಗಳೂರು ವಿವಿ ಅಧೀನದಲ್ಲಿ 208 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು. ಇದು ಈಗ 150ಕ್ಕೆ ಇಳಿದಿದೆ. ಸುಮಾರು 58 ಕಾಲೇಜು ವಿವಿಯ ಅಧೀನದಲ್ಲಿಲ್ಲ. 26 ಕಾಲೇಜು ಕೊಡಗು ವಿವಿಗೆ ಸೇರ್ಪಡೆಯಾಗಿವೆ. 9 ಕಾಲೇಜು ಸ್ವಾಯತ್ತ ಸಂಸ್ಥೆಗಳಾಗಿವೆ. ಇಲ್ಲಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯ ಕಡಿಮೆಯಾಗಿ ವಿವಿ ಆದಾಯಕ್ಕೆ ಗಂಭೀರ ಹೊಡೆತ ಬಿದ್ದಿದೆ. ಹಿಂದೆ ವಿವಿ ನಡೆಸುತ್ತಿದ್ದ ಪದವಿ ಹಾಗೂ ಸ್ನಾತಕ ಪದವಿ ಕೋರ್ಸುಗಳನ್ನು ಖಾಸಗಿ ಕಾಲೇಜುಗಳು ಆರಂಭಿಸಿವೆ. ಇದರಿಂದಾಗಿ ವಿದ್ಯಾರ್ಥಿಗಳು ಸ್ಥಳೀಯ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಮಂಗಳೂರು ವಿವಿಯಲ್ಲಿ ಹಿಂದೆ 370 ಕಾಯಂ ಬೋಧಕರಿದ್ದರು. ಈಗ 160ಕ್ಕೆ ಕುಸಿದಿದೆ. ಪ್ರತಿ ವರ್ಷ ಬೋಧಕ ಸಿಬ್ಬಂದಿ ನಿವೃತ್ತರಾಗುತ್ತಿದ್ದಾರೆ. ಆದರೆ ಕಳೆದ 16 ವರ್ಷದಿಂದ ಕಾಯಂ ಬೋಧಕರ ನೇಮಕವಾಗಿಲ್ಲ. ಈಗ 26 ವಿಭಾಗಗಳಿದ್ದು, 40 ಕಾರ್ಯಕ್ರಮಗಳು ಇವೆ. 250 ಅತಿಥಿ ಉಪನ್ಯಾಸಕರಿದ್ದಾರೆ. ತಲಾ 40 ಸಾವಿರ ರು. ಮಾಸಿಕ ಗೌರವಧನವನ್ನು ವಿವಿ ನಿಧಿಯಿಂದಲೇ ನೀಡಲಾಗುತ್ತಿದೆ. ಕಳೆದ 7 ವರ್ಷಗಳಿಂದ ಸರ್ಕಾರದ ಅನುದಾನ ಸಿಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಒಂದೆಡೆ ಕಡಿಮೆಯಾದ ಕಾಲೇಜುಗಳು, ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕದಿಂದಲೇ ಬೋಧಕ-ಬೋಧಕೇತರ ಸಿಬ್ಬಂದಿಯ ವೇತನ ಪಾವತಿಯಾಗಬೇಕು. ಈ ಸಾಂಸ್ಥಿಕ ಸಮಸ್ಯೆಯಿಂದ ವಿವಿ ಬಳಲುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕವೂ ವಿವಿಯ ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನುತ್ತಾರೆ ನಿವೃತ್ತ ಅಧಿಕಾರಿಯೊಬ್ಬರು.

ನಿವೃತ್ತರಿಗೂ ಪಿಂಚಣಿಗೆ ದುಡ್ಡಿಲ್ಲ:

ವಿವಿಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ₹1.50 ಕೋಟಿ ಗೌರವಧನ ಮೊತ್ತ ಬೇಕಾಗುತ್ತದೆ. 409 ಮಂದಿ ನಿವೃತ್ತರಿಗೆ ಪಿಂಚಣಿಗೆ ₹1.15 ಕೋಟಿ ಬೇಕು. ಇದರಲ್ಲಿ ಸರ್ಕಾರ ಆರಂಭದಲ್ಲಿ ₹83 ಲಕ್ಷ ಪಿಂಚಣಿ ಮೊತ್ತ ನೀಡಿತ್ತು. ಈಗ ಮತ್ತೆ ₹1.3 ಕೋಟಿ ಮೊತ್ತ ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಬಾಕಿ ಇರುವ 24 ಮಂದಿಗೆ ಪಿಂಚಣಿ ಪಾವತಿಸಬೇಕಾಗಿದೆ. ವೆಚ್ಚ ಕಡಿತಕ್ಕೆ ಸಿಕ್ಕಿದ ನೆರವು:

ಸರ್ಕಾರದ ನಿರ್ದೇಶನದಂತೆ 460 ಹೊರಗುತ್ತಿಗೆ ಸಿಬ್ಬಂದಿ ಪೈಕಿ 124 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಪ್ರತಿ ವಿಭಾಗದಲ್ಲಿ ಇತರೆ ವೆಚ್ಚವಾಗಿ ₹70 ಸಾವಿರವನ್ನು ಉಳಿಕೆ ಮಾಡಲಾಯಿತು. 40 ದೂರವಾಣಿ ಸಂಪರ್ಕ ಕಿತ್ತುಹಾಕಿ ₹40 ಸಾವಿರ ಉಳಿಸಲಾಯಿತು. ವೆಚ್ಚಕ್ಕೆ ಕಡಿವಾಣ ಹಾಕಿದ ಈ ಕ್ರಮವನ್ನು ಗಮನಿಸಿದ ಸರ್ಕಾರ ಬಾಕಿ ಪಿಂಚಣಿ ಮೊತ್ತವನ್ನು ಬಿಡುಗಡೆಗೊಳಿಸಿದೆ. ಹಲವು ವಿಭಾಗಗಳೇ ಬಂದ್‌:

ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗ ತಾತ್ಕಾಲಿಕ ಬಂದ್‌ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಪುನಃ ತೆರೆವ ನಿರ್ಧಾರವನ್ನು ವಿವಿ ಕೈಗೊಂಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಸ್ತುತ 10 ವಿದ್ಯಾರ್ಥಿಗಳಿದ್ದರೆ ಮಾತ್ರ ವಿಭಾಗ ಮುಂದುವರಿಸಲಾಗುತ್ತಿದೆ. ವಿವಿ ಕಾಲೇಜಿನಲ್ಲಿ ಇತಿಹಾಸ ಹಾಗೂ ವಾಣಿಜ್ಯಶಾಸ್ತ್ರ ವಿಭಾಗ ಬಂದ್‌ ಮಾಡಲಾಗಿದೆ. ಪರಿಸರ ವಿಜ್ಞಾನ, ಲೆಕ್ಕಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್‌), ಎಲೆಕ್ಟ್ರಾನಿಕ್ಸ್‌, ಎಂ.ಇಡಿ, ಎಂಎಸ್‌ಡಬ್ಲ್ಯು, ಜಿಯೊ ಇನ್ಫೊಮ್ಯಾಟಿಕ್ಸ್‌, ಮೆಟೀರಿಯಲ್‌ ಸೈನ್ಸ್‌, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗ ಸಮೇತ 9ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಲಭ್ಯವಿಲ್ಲದ ಕಾರಣ ಪ್ರಥಮ ಶೈಕ್ಷಣಿಕ ವರ್ಷವನ್ನು ತಾತ್ಕಾಲಿಕವಾಗಿ ಈ ಬಾರಿ ಮುಚ್ಚಲಾಗಿದೆ.

₹13.05 ಕೋಟಿ ಕೊರತೆ ಬಜೆಟ್‌: 

ಮಂಗಳೂರು ವಿವಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಉಡುಪಿಯ ಬೆಳಪಿನಲ್ಲಿ ಆಧುನಿಕ ಸಂಶೋಧನಾ ಕೇಂದ್ರ ನಿರ್ಮಿಸಲಾಗಿದೆ. ಕಟ್ಟಡ ಕಾರ್ಯಾರಂಭಕ್ಕೆ ಇನ್ನೂ ₹12 ಕೋಟಿ ಬೇಕು. ಉಳಿದಂತೆ ಪ್ರಸಕ್ತ ಇರುವ 150 ಕಾಲೇಜುಗಳಲ್ಲಿ 70 ಸಾವಿರ ವಿದ್ಯಾರ್ಥಿಗಳಿದ್ದಾರೆ. 160 ಮಂದಿ ಬೋಧಕೇತರ ಸಿಬ್ಬಂದಿಯಿದ್ದಾರೆ.

ವಿವಿ ₹58.29 ಕೋಟಿ ಆಂತರಿಕ ಆದಾಯ ಹೊಂದಿದ್ದು, ₹16.59 ಕೋಟಿ ಸರ್ಕಾರದ ಅನುದಾನ ಸೇರಿ ಒಟ್ಟು ₹74.88 ಕೋಟಿ ಆದಾಯ ಹೊಂದಿದೆ. ಅದಕ್ಕೂ ಮಿಗಿಲಾದ ₹87.93 ಕೋಟಿ ಖರ್ಚನ್ನು ಬಜೆಟ್‌ನಲ್ಲಿ ಕಾಣಿಸಿದೆ. ಸುಮಾರು ₹13.05 ಕೋಟಿ ಕೊರತೆ ಬಜೆಟ್‌ ಕಾಣಿಸಲಾಗಿದೆ.

ಬಾಕ್ಸ್‌ಹಗರಣಗಳ ಸರಮಾಲೆಹಿಂದಿನ ಮೂವರು ಕುಲಪತಿಗಳ ಅವಧಿಯಲ್ಲಿ ವಿವಿಯಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ. ಮಾಜಿ ಕುಲಪತಿ ಪ್ರೊ.ಶಿವಶಂಕರಮೂರ್ತಿ ಹಾಗೂ ಪ್ರೊ.ಕೆ.ಬೈರಪ್ಪ ಅವಧಿಯಲ್ಲಿನ ಸುಮಾರು ₹100 ಕೋಟಿ ಮೊತ್ತದ ಹಗರಣಗಳ ಬಗ್ಗೆ ತನಿಖೆ ನಡೆದಿದೆ. ಆದರೆ ವಿವಿ ಸಿಂಡಿಕೇಟ್‌ ಸಭೆಯಲ್ಲಿ ಈ ವರದಿ ಮಂಡನೆಗೂ ಮೊದಲೇ ಇವರಿಬ್ಬರು ಮೃತಪಟ್ಟರು. ವಿವಿ ಆವರಣದಲ್ಲಿ ₹53.71 ಕೋಟಿಯಲ್ಲಿ ವಿದೇಶಿ ಹಾಸ್ಟೆಲ್‌ ನಿರ್ಮಾಣ ಪೂರ್ಣಗೊಂಡಿಲ್ಲ. ಪಾಳುಬಿದ್ದ ಹಾಸ್ಟೆಲ್‌ ಹೆಸರಿನಲ್ಲಿ ಗುತ್ತಿಗೆ ಸಂಸ್ಥೆಗೆ ಒಟ್ಟು ₹36.6 ಕೋಟಿ ಮೊತ್ತ ವಿವಿ ಪಾವತಿಸಿದ ಬಗ್ಗೆಯೂ ತನಿಖೆ ನಡೆಯುತ್ತಿದೆ.---ಬಾಕ್ಸ್‌---

ವಿವಿ ನಡೆದು ಬಂದ ಹಾದಿ

ಮೈಸೂರು ಮತ್ತು ಧಾರವಾಡ ವಿವಿ ಮಾತ್ರವಿದ್ದ ಕಾಲದಲ್ಲಿ ಕರಾವಳಿ ಮತ್ತು ಕೊಡಗಿನವರಿಗೆ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ನಗರದಿಂದ 20 ಕಿ.ಮೀ. ದೂರದ ಕೊಣಾಜೆಯಲ್ಲಿ ಮಂಗಳೂರು ವಿವಿ ಸ್ಥಾಪನೆಗೊಂಡಿತು. ಆರಂಭದಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರವಾಗಿದ್ದರೆ, 1972ರಲ್ಲಿ ಕೊಣಾಜೆಗೆ ಈ ಸ್ನಾತಕೋತ್ತರ ಕೇಂದ್ರ ಪೂರ್ಣ ಕಟ್ಟಡದೊಂದಿಗೆ ಸ್ಥಳಾಂತರಗೊಂಡಿತು. ಬ್ಯಾಂಕಿಂಗ್‌ ತಜ್ಞ ಸೂರ್ಯನಾರಾಯಣ ಅಡಿಗ ಹಾಗೂ ಶಾಸಕ ಯು.ಟಿ.ಫರೀದ್‌ ಪ್ರಯತ್ನದಿಂದಾಗಿ ವಿವಿ ಅಸ್ತಿತ್ವಕ್ಕೆ ಬಂತು. ವಿವಿ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ.ಎಸ್‌.ವಿ.ಪರಮೇಶ್ವರ ಭಟ್ಟರು ಮೈಸೂರಿನ ಮಾನಸ ಸಂಗೋತ್ರಿ ಮಾದರಿಯಲ್ಲೇ ಮಂಗಳೂರು ವಿವಿಗೆ ‘ಮಂಗಳ ಗಂಗೋತ್ರಿ’ ಎಂಬ ಹೆಸರು ಸೂಚಿಸಿದರು. --ಕೋಟ್ --

ಅನುದಾನದ ನಿರೀಕ್ಷೆಯಲ್ಲಿದ್ದೇವೆ

ನಾನಾ ಕಾರಣಗಳಿಂದ ಮಂಗಳೂರು ವಿವಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಇದನ್ನು ಆರ್ಥಿಕವಾಗಿ ಮೇಲೆತ್ತಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ವಿವಿ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನದ ನಿರೀಕ್ಷೆಯಲ್ಲಿದ್ದೇವೆ.

-ಪ್ರೊ.ಪಿ.ಎಲ್‌.ಧರ್ಮ, ಕುಲಪತಿ, ಮಂಗಳೂರು ವಿವಿ--ಕೋಟ್‌--

ಸರ್ಕಾರ ನೆರವು ಕೊಡಬೇಕು

ನೀತಿ ಆಯೋಗದಂತೆ ಜಿಲ್ಲೆಗೊಂದು ವಿವಿಗಾಗಿ ಕೊಡಗಿಗೆ ಪ್ರತ್ಯೇಕ ವಿವಿ ಆರಂಭಿಸಿದರೂ ಮೂಲಸೌಕರ್ಯ ಕಲ್ಪಿಸಲಿಲ್ಲ. ನಿವೃತ್ತರಿಗೆ ಮುಂದಿನ 5 ವರ್ಷಕ್ಕೆ ಬೇಕಾಗುವಷ್ಟು ಪಿಂಚಣಿ ಏಕಕಾಲದಲ್ಲಿ ಬಿಡುಗಡೆಗೊಳಿಸಿದರೆ ಮುಂದೆ ವಿವಿ ನಡೆಸುವುದು ಸುಲಭವಾಗಲಿದೆ. ಉಳಿದಂತೆ ಪರೀಕ್ಷೆ ಶುಲ್ಕ, ಪ್ರವೇಶ ಶುಲ್ಕದಲ್ಲಿ ವಿವಿ ನಿರ್ವಹಿಸಲು ಸಾಧ್ಯ. ಹೊಸ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕೂಡಲೇ ನೆರವು ನೀಡಬೇಕು.

-ಪ್ರೊ.ಪಿ.ಎಸ್‌.ಯಡಪಡಿತ್ತಾಯ, ನಿವೃತ್ತ ಕುಲಪತಿ, ಮಂಗಳೂರು ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ