ಮಂಗಳೂರು- ವಿಲ್ಲುಪುರಂ ಹೆದ್ದಾರಿ ಕಾಮಗಾರಿ ಮತ್ತೆ ಚುರುಕು

KannadaprabhaNewsNetwork |  
Published : Jun 11, 2025, 12:34 PM IST
ಕಾಮಗಾರಿ | Kannada Prabha

ಸಾರಾಂಶ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ, ಉಜಿರೆ ಮೊದಲಾದ ಪೇಟೆಯ ಪ್ರಮುಖ ಸ್ಥಳಗಳಲ್ಲಿ ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿದೆ. ಇದು ಬಹುತೇಕ ಮಳೆಗಾಲದ ಬಳಿಕವೇ ಆರಂಭವಾಗುವ ನಿರೀಕ್ಷೆ ಇದೆ. ಮಳೆ ಆರಂಭವಾಗುವ ತನಕ ಕಾಮಗಾರಿ ವೇಗವಾಗಿ ಸಾಗಿತ್ತು. ಆದರೆ ಮೇನಲ್ಲಿ ವಿಪರೀತವಾಗಿ ಸುರಿದ ಮಳೆ ಕಾಮಗಾರಿಗೆ ಅಡ್ಡಿಯಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿಪರೀತ ಮಳೆ ಸಂದರ್ಭ ನಿಧಾನಗತಿಯಲ್ಲಿ ನಡೆಯುತ್ತಿದ್ದ ಹೆದ್ದಾರಿ ಕಾಮಗಾರಿ, ಮಳೆ ಕಡಿಮೆಯಾಗುತ್ತಿದ್ದಂತೆ ಕಳೆದ ಮೂರು-ನಾಲ್ಕು ದಿನಗಳಿಂದ ಮತ್ತೆ ಚುರುಕು ಪಡೆದಿದೆ.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿಯ 2ನೇ ಹಂತದ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ 35 ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಕಳೆದ ವರ್ಷ ಗುತ್ತಿಗೆದಾರರು ಬದಲಾದ ಬಳಿಕ ಕಾಮಗಾರಿ ವ್ಯವಸ್ಥಿತವಾಗಿ ಮತ್ತು ವೇಗವಾಗಿ ನಡೆಯುತ್ತಿದೆ. ಹಿಂದಿನ ಗುತ್ತಿಗೆದಾರರು ಎಲ್ಲೆಂದರಲ್ಲಿ ರಸ್ತೆ ಅಗೆದದ್ದು ಬಿಟ್ಟರೆ ಹೆಚ್ಚಿನ ಕೆಲಸವನ್ನು ಮಾಡಿರಲಿಲ್ಲ. ಅವರು ಮಾಡಿದ ಈ ಕೆಲಸಕ್ಕೆ ಒಂದು ಸ್ವರೂಪ ತರುವುದು ಸವಾಲಾಗಿತ್ತು. ಈಗ ಬಹುತೇಕ ಈ ಕಾಮಗಾರಿ ಪೂರ್ಣಗೊಂಡು ರಸ್ತೆ ಅಗಲೀಕರಣವಾಗಿದೆ. ಹೆಚ್ಚಿನ ಕಡೆಗಳಲ್ಲಿ ಡಾಂಬರೀಕರಣ ಕೂಡ ನಡೆದಿದೆ.

ಬೆಳ್ತಂಗಡಿ, ಉಜಿರೆ ಮೊದಲಾದ ಪೇಟೆಯ ಪ್ರಮುಖ ಸ್ಥಳಗಳಲ್ಲಿ ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿದೆ. ಇದು ಬಹುತೇಕ ಮಳೆಗಾಲದ ಬಳಿಕವೇ ಆರಂಭವಾಗುವ ನಿರೀಕ್ಷೆ ಇದೆ. ಮಳೆ ಆರಂಭವಾಗುವ ತನಕ ಕಾಮಗಾರಿ ವೇಗವಾಗಿ ಸಾಗಿತ್ತು. ಆದರೆ ಮೇನಲ್ಲಿ ವಿಪರೀತವಾಗಿ ಸುರಿದ ಮಳೆ ಕಾಮಗಾರಿಗೆ ಅಡ್ಡಿಯಾಗಿತ್ತು.ಕಾಮಗಾರಿ ಚುರುಕು:

ಈಗ ಮಳೆ ಕಡಿಮೆಯಾಗಿದ್ದು, ಕಾಮಗಾರಿ ಮತ್ತೆ ಚುರುಕು ಪಡೆದಿದೆ. ನಿಡಿಗಲ್, ಚಿಬಿದ್ರೆ ಮೊದಲಾದ ಕಡೆ ಡಾಂಬರೀಕರಣ ನಡೆಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಕೆಲವು ದಿನ ಮಳೆಬಿಟ್ಟರೆ ಅಗೆದು ಹಾಕಲಾದ ಕಡೆ ರಸ್ತೆ ಕೆಲಸ ಪೂರ್ಣಗೊಳ್ಳಲಿದೆ. ಆದರೆ ಮಳೆ ಬಂದರೆ ಕಾಮಗಾರಿಗೆ ಅಡ್ಡಿಯಾಗಲಿದೆ. ಕೆಲವು ಪರಿಸರಗಳಲ್ಲಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಲಿದೆ.ಕಳೆದ ಮಳೆಗಾಲದಲ್ಲಿ ಪರದಾಟ:

ಕಳೆದ ಮಳೆಗಾಲದ ಮೊದಲು ರಸ್ತೆಯನ್ನು ಎಲ್ಲೆಂದರಲ್ಲಿ ಅಗೆದು ಹಾಕಿ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ವ್ಯಾಪ್ತಿಯ ಏಳು ಕಡೆಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿತ್ತು. ಹೆದ್ದಾರಿ ಇಡೀ ಮಣ್ಣುಮಯವಾಗಿ ಹಲವು ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದ್ದರು. ಮಳೆಗಾಲದ ಮೂರು ತಿಂಗಳು ಈ ಪರದಾಟ ಮುಂದುವರಿದಿತ್ತು. ರಸ್ತೆ ಬದಿಯ ಮನೆಗಳಿಗೂ ನೀರು ನುಗ್ಗಿತ್ತು. ಚರಂಡಿ ಇಲ್ಲದೆ ಹೆದ್ದಾರಿಯೇ ಹೊಳೆಯಾಗಿತ್ತು. ಅಂದಿನ ಗುತ್ತಿಗೆದಾರರು ಇದಕ್ಕೆ ಸರಿಯಾದ ಸ್ಪಂದನೆ ನೀಡದ ಕಾರಣ ಡಿಪಿ ಜೈನ್ ಕಂಪನಿಯಿಂದ ಮುಗ್ರೋಡಿ ಕನ್‌ಸ್ಟ್ರಕ್ಷನ್‌ಗೆ ಒಳ ಒಪ್ಪಂದದ ಆಧಾರದಲ್ಲಿ ಕಾಮಗಾರಿ ವಹಿಸಲಾಗಿದೆ. ಅದರ ಬಳಿಕ ರಸ್ತೆ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಕಂಡುಬಂದಿರಲಿಲ್ಲ.----------------------

ಆಗಬೇಕಾದ ಕಾಮಗಾರಿಗಳು-ಹೆದ್ದಾರಿ ಬದಿ ಸಮರ್ಪಕ ಚರಂಡಿ ನಿರ್ಮಾಣ.

-ಚರಂಡಿ ನಿರ್ಮಿಸಿರುವ ಕಡೆ ತೆರೆದ ಚರಂಡಿಗಳಿದ್ದು, ಅವುಗಳನ್ನು ಮುಚ್ಚುವ ಕೆಲಸ.

-ರಸ್ತೆ ಬದಿಯ ಮರಗಳ ಬುಡ ಭಾಗದ ತನಕ ಅಗೆದು ಹಾಕಲಾಗಿದ್ದು, ಮರಗಳು ರಸ್ತೆಗೆ ಉರುಳದಂತೆ ಕ್ರಮವಹಿಸಬೇಕು.

-ಸಂಪರ್ಕ ರಸ್ತೆಗಳಿರುವ ಕಡೆ ಮೋರಿಗಳನ್ನು ಅಳವಡಿಸಬೇಕು.

-ರಸ್ತೆ ಬದಿ ಕುಸಿತ ಉಂಟಾಗದಂತೆ ಕೆಲವೆಡೆ ತಡೆಗೋಡೆ ರಚನೆಯಾಗಬೇಕು.

-ಮಳೆ ನೀರು ರಸ್ತೆಯಲ್ಲಿ ಹರಿಯದಂತೆ ವ್ಯವಸ್ಥೆಯಾಗಬೇಕು.

-ರಸ್ತೆ ಅಗಲೀಕರಣವಾದ ಜಾಗದಲ್ಲಿ ಪಾರ್ಕಿಂಗ್‌ಗೆ ಕಡಿವಾಣ ಹಾಕಬೇಕು.

-ಸ್ಥಳಾಂತರಗೊಂಡಿರುವ ಕೆಲವು ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಈ ಬಗ್ಗೆ ಗಮನಹರಿಸಬೇಕು.

...........

ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಮಳೆ ಆರಂಭಕ್ಕೆ ಮೊದಲು ಅಗತ್ಯ ಕೆಲಸಗಳನ್ನು ಮುಗಿಸಿ ಕೊಡುವಂತೆ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

। ಚಂದ್ರಶೇಖರ ಕೆ.ಟಿ., ಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು.-----------

ಉಜಿರೆ-ಬೆಳ್ತಂಗಡಿ ರಸ್ತೆಯ ಅಲ್ಲಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ರಸ್ತೆ ಕವಲೊಡೆಯುವ ಕಡೆ ಬ್ಯಾರಿಕೇಡ್ ಅಳವಡಿಸಬೇಕು.

। ಚೇತನ್ ಕುಮಾರ್, ವಾಹನ ಸವಾರ, ಬೆಳ್ತಂಗಡಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ