ಕನ್ನಡಪ್ರಭ ವಾರ್ತೆ ಮಂಗಳೂರು
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೋಚಿಮುಲ್) ಉದ್ಯೋಗಿಗಳ ನೇಮಕಾತಿ ಪ್ರಕರಣದಲ್ಲಿ ಕೈಜೋಡಿಸಿದ ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು, ಪರೀಕ್ಷಾಂಗ ಕುಲಸಚಿವರನ್ನು ಅಮಾನತುಗೊಳಿಸಬೇಕು ಹಾಗೂ ಪ್ರಭಾರ ಕುಲಪತಿ ರಾಜಿನಾಮೆ ನೀಡಬೇಕು, ರಾಜ್ಯ ಸರ್ಕಾರ ಕೂಡಲೇ ಕುಲಪತಿಗಳನ್ನು ನೇಮಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಅಭಾವಿಪ) ಮಂಗಳೂರು ಆಗ್ರಹಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀರಾಮ್ ಅಂಗೀರಸ, ಗೊಂದಲದ ಗೂಡಾಗಿರುವ ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಯಲು ಸರ್ಕಾರ ಗಮನ ಹರಿಸದೇ ಇದ್ದರೆ ಮಂಗಳೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳನ್ನು ಸೇರಿಸಿ ‘ವಿವಿ ಚಲೋ’ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೋಚಿಮುಲ್ ಅವ್ಯವಹಾರಕ್ಕೆ ಸಂಬಂಧಿಸಿ ಜ.18ರಂದು ಮಂಗಳೂರು ವಿವಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯೋಗಿಗಳ ನೇಮಕಾತಿಗೆ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿಯನ್ನು ಮಂಗಳೂರು ವಿವಿ ವಹಿಸಿಕೊಂಡಿತ್ತು. ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜು ಚೆಲ್ಲಣ್ಣನವರ್ ನೇಮಕಾತಿ ಪರೀಕ್ಷಾ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಮೇಲೆ ಪ್ರಶ್ನೆಪತ್ರಿಕೆ ಮಾರಾಟ ಆರೋಪ ಇದ್ದು, ಇಡಿ ತಂಡದ ದಾಳಿ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಕುಲಪತಿಗಳನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ವಿವಿ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಪರೀಕ್ಷಾ ನಿರ್ವಹಣೆಯಲ್ಲಿ ಎಡವಿದೆ. ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ವಿದೇಶಿ ಉದ್ಯೋಗದಿಂದ ವಂಚಿತಗೊಳ್ಳುತ್ತಿದ್ದಾರೆ. ವಿವಿ ಬಗ್ಗೆ ಇರದ ಆಸಕ್ತಿ ಹೊರಗಿನ ಪರೀಕ್ಷೆ ನಡೆಸಲು ಇರುವುದು ಖೇದಕರ ಎಂದರು.ಕಾಯಂ ಕುಲಪತಿ ನೇಮಿಸಿ: ಕಳೆದ ಏಳು ತಿಂಗಳಿಂದ ಕಾಯಂ ಕುಲಪತಿಗಳ ನೇಮಕವಾಗಿಲ್ಲ. ಸಿಂಡಿಕೇಟ್ ಸದಸ್ಯರನ್ನು ನೇಮಿಸಲು ಹಾತೊರೆಯುವ ಸರ್ಕಾರ ಕುಲಪತಿ ನೇಮಕದ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅನಿಶ್ಚಿತತೆ ತಲೆದೋರಿದೆ. ಘಟಿಕೋತ್ಸವ ಸಮೀಪಿಸುತ್ತಿದ್ದು, ಕುಲಪತಿ, ಕುಲಸಚಿವರು ರಜೆಯಲ್ಲಿದ್ದಾರೆ. ಹೀಗಾಗಿ ಮುಖ್ಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಕುಲಪತಿ ನೇಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೊಯ್ಲ, ಆದಿತ್ಯ, ನಿಶಾನ್ ಆಳ್ವ, ಶ್ರೇಯಸ್ ಇದ್ದರು.