ಕೆ.ಎಚ್.ದಾಸಪ್ಪ ರೈಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ

KannadaprabhaNewsNetwork |  
Published : Jun 20, 2026, 03:00 AM IST
ಕೆ.ಎಚ್.ದಾಸಪ್ಪ ರೈ | Kannada Prabha

ಸಾರಾಂಶ

ಮಂಗಳೂರು: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಯೋಜನೆಯ ಭ್ರಾಮರೀ ಯಕ್ಷವೈಭವ 2026 ಕಾರ್ಯಕ್ರಮ ಆ.1ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಮಂಗಳೂರು: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಯೋಜನೆಯ ಭ್ರಾಮರೀ ಯಕ್ಷವೈಭವ 2026 ಕಾರ್ಯಕ್ರಮ ಆ.1ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕೆ.ಎಚ್.ದಾಸಪ್ಪ ರೈ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು 15 ಸಾವಿರ ರು. ನಗದು, ಪ್ರಶಸ್ತಿ ಪತ್ರ, ಬೆಳ್ಳಿಯ ಪದಕವನ್ನು ಒಳಗೊಂಡಿದೆ.

ತನ್ನ ಹದಿನೈದನೆಯ ವಯಸ್ಸಿನಲ್ಲಿ ಯಕ್ಷಗಾನ ರಂಗವನ್ನು ಪ್ರವೇಶ ಮಾಡಿದ ಕೆ.ಎಚ್.ದಾಸಪ್ಪ ರೈ ಅವರು ಆರು ದಶಕಗಳಿಂದಲೂ ಅಧಿಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯ ಕಲಾವಿದರು. ಕರ್ನಾಟಕ ಮೇಳ, ಕದ್ರಿ ಮೇಳ, ಕುಂಬಳೆ ಕಣಿಪುರ ಮೇಳ, ಮಂಗಳಾದೇವಿ ಮೇಳ ಸಹಿತ ದೇಶ ವಿದೇಶದಲ್ಲಿ ಪ್ರದರ್ಶನ ನೀಡಿದ ಹಿರಿಯ ಕಲಾವಿದರು. ಕೋಟಿ ಚೆನ್ನಯ ಯಕ್ಷಗಾನದ ಕೋಟಿ, ಕಾಡಮಲ್ಲಿಗೆ ಯಕ್ಷಗಾನದ ಮೈಂದ ಗುರಿಕಾರೆ ಪಾತ್ರದ ಮೂಲಕ ಯಕ್ಷಭಿಮಾನಿಗಳನ್ನು ಸೆಳೆದವರು. ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಸ್ವತಃ ಮೇಳ ನಡೆಸಿ ಮೇಳದ ಯಜಮಾನರಾಗಿಯೂ ಗುರುತಿಸಿಕೊಂಡಿದ್ದರು.

ಯಕ್ಷಸೇವಾ ಪುರಸ್ಕಾರ:

ಕಳೆದ ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ಮೋನಪ್ಪ ಗೌಡ ಹಾಗೂ ಕಳೆದ 90 ವರ್ಷಕ್ಕೂ ಅಧಿಕ ಕಾಲದಿಂದ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು, ಯಕ್ಷಗಾನ ತರಬೇತಿ ನಡೆಸುತ್ತಿರುವ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ತೇಯ ಯಕ್ಷಗಾನ ಮತ್ತು ಭಜನಾಮಂಡಳಿ ಸಂಸ್ಥೆಗೆ ಈ ಬಾರಿಯ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಭ್ರಾಮರೀ ಯಕ್ಷಸೇವಾ ಪುರಸ್ಕಾರ ತಲಾ ಆರು ಸಾವಿರ ರು. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಯಕ್ಷಗಾನ ಅರ್ಥಧಾರಿ ಜಿ.ಕೆ.ಭಟ್ ಸೇರಾಜೆ, ಶಾಸಕ ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ರಾಜಶೇಖರ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ್ ಶೆಟ್ಟಿ ಪುಳಿಂಚ ಮೊದಲಾದವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ಅಂಭಾ ಶಪಥ, ಲಕ್ಷ್ಮೀ ಸ್ವಯಂವರ, ತಾಮ್ರದ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಜೆ.ಟಿ.ಪಾಟೀಲರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಿ
ನೀರಿಗಾಗಿ ಖಾಲಿ ಕೊಡಗಳೊಂದಿಗೆ ಮಹಿಳೆಯರ ಪ್ರತಿಭಟನೆ