ಮಂಗಳೂರು-ಬೆಂಗಳೂರು ರೈಲು ಮಾರ್ಗ ಸಂಚಾರಕ್ಕೆ ರೆಡಿ

KannadaprabhaNewsNetwork |  
Published : Aug 04, 2026, 02:15 AM IST
 | Kannada Prabha

ಸಾರಾಂಶ

ಮಂಗಳೂರು - ಬೆಂಗಳೂರು ರೈಲು ಮಾರ್ಗದ ಎಡಕುಮೇರಿ - ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಮಣ್ಣು ಕುಸಿತ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸೋಮವಾರ ರಾತ್ರಿ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ.

ಮಂಗಳೂರು: ಮಂಗಳೂರು - ಬೆಂಗಳೂರು ರೈಲು ಮಾರ್ಗದ ಎಡಕುಮೇರಿ - ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಮಣ್ಣು ಕುಸಿತ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸೋಮವಾರ ರಾತ್ರಿ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ. ದುರಸ್ತಿ ಕಾರ್ಯಾಚರಣೆ ಬಳಿಕ ರೈಲು ಮಾರ್ಗವನ್ನು ಸೋಮವಾರ ರಾತ್ರಿ ಸಂಚಾರಕ್ಕೆ ಸೂಕ್ತವಾಗಿದೆ ಎಂದು ಪ್ರಮಾಣೀಕರಿಸಲಾಯಿತು.

ಘಟನಾ ಸ್ಥಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಘಂಟೆಗೆ 10 ಕಿ.ಮೀ. ತಾತ್ಕಾಲಿಕ ವೇಗದ ನಿರ್ಬಂಧ ಜಾರಿಯಲ್ಲಿದೆ. ರೈಲು ಸಂಚಾರದ ಸಾಮಾನ್ಯ ವೇಳಾ ಪಟ್ಟಿಗಳನ್ನು ಹಂತಹಂತವಾಗಿ ಮರು ಹೊಂದಿಸಲಾಗುತ್ತದೆ, ಕೆಲ ವಿಳಂಬಗಳು ಮುಂದುವರಿದು ಬಳಿಕ ಎಂದಿನಂತೆ ರೈಲು ಸೇವೆ ಮುಂದುವರಿಯಲಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.ದುರಸ್ತಿ ಕಾರ್ಯಾಚರಣೆ ಸ್ಥಳಕ್ಕೆ ಡಿಆರ್‌ಎಂ ಮುದಿತ್ ಮಿತ್ತಲ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿ ನಿರ್ದೇಶನಗಳನ್ನು ನೀಡಿದರು. ಕಾರ್ಯಾಚರಣೆ ಪೂರ್ಣವಾದ ಬಳಿಕ ಪರೀಕ್ಷಾರ್ಥ ಎಂಜಿನ್ ಓಡಿಸಲಾಯಿತು.ಇಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ: ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ದ.ಕ. ಹಾಗೂ ಉಡುಪಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ದ.ಕ. ಜಿಲ್ಲೆಯ ಮಂಗಳೂರು ಉಪ ವಿಭಾಗ ವ್ಯಾಪ್ತಿಯ ಮಂಗಳೂರು, ಬಂಟ್ವಾಳ, ಮೂಲ್ಕಿ, ಉಳ್ಳಾಲ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ (10ನೇ ತರಗತಿವರೆಗೆ) ಹಾಗೂ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ (ದ್ವಿತೀಯ ಪಿಯುಸಿ ವರೆಗೆ) ಕಾಲೇಜಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರಜೆ ಘೋಷಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ತರಗತಿ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೊತ್ತರ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತರಿಗೆ ಜನಪರ ಕಾಳಜಿ ಅಗತ್ಯ: ದೇಸಾಯಿ
ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಖಚಿತ: ಸುಮತಿ