ಮಂಗಳೂರು: ಶಾರದಾ ಸಮೂಹ ಸಂಸ್ಥೆಗಳ ಹೊನಲು ಬೆಳಕಿನ ಕ್ರೀಡೋತ್ಸವ ಉದ್ಘಾಟನೆ

KannadaprabhaNewsNetwork |  
Published : Dec 09, 2025, 02:00 AM IST
ಸಂಸದ ಯದುವೀರ್‌ ಅವರನ್ನು ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ಭಾನುವಾರ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ಸಂಪನ್ನಗೊಂಡಿತು.

ಮಂಗಳೂರು: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಕಾರ್ಯ ಆಗಬೇಕಿದೆ ಎಂದು ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭಿಪ್ರಾಯಪಟ್ಟಿದ್ದಾರೆ.ನಗರದ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ಭಾನುವಾರ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಜರು ಧರ್ಮ ಪಾಲನೆ ಮಾಡುತ್ತಿದ್ದುದರಿಂದ ಉತ್ತಮ ಕೆಲಸ ಕಾರ್ಯಗಳನ್ನು ಅವರು ಮಾಡುವಂತಾಯಿತು. ರಾಜಪ್ರಭುತ್ವ ಈಗ ಇಲ್ಲದಿದ್ದರೂ ಅವರೆಲ್ಲರ ಹೆಸರು ಶಾಶ್ವತವಾಗಿರಲು ಧರ್ಮ ಪಾಲನೆಯೇ ಮುಖ್ಯ ಕಾರಣ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಸವಾಲು ದೊಡ್ಡದಿದ್ದರೂ, ಆ ಕಾರ್ಯ ಆಗಲೇಬೇಕಾದ ಅನಿವಾರ್ಯತೆಯಿದೆ ಎಂದು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ್ದರೂ ಇಂದಿಗೂ ಅನೇಕ ಕಡೆಗಳಲ್ಲಿ ಶಿಕ್ಷಣ ಕ್ಷೇತ್ರ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಆದರೆ ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ- ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಕೇಂದ್ರ ಸರ್ಕಾರ ಕ್ರೀಡೆಗೆ ಸರ್ವ ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವುದರೊಂದಿಗೆ ವಿಶ್ವ ಮಟ್ಟದಲ್ಲಿ ಭಾರತ ಇನ್ನಷ್ಟು ಮುಂದುವರಿಯಬೇಕಿದೆ ಎಂದ ಯದುವೀರ್‌, ನಮ್ಮ ದೇಶದಲ್ಲಿ ಕಾಮನ್‌ವೆಲ್ತ್‌ ಕ್ರೀಡೆ ಆಯೋಜನೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಮುಂದೆ ಒಲಂಪಿಕ್‌ ಕ್ರೀಡಾಕೂಟವನ್ನು ಭಾರತದಲ್ಲೇ ನಡೆಸುವ ಸುಯೋಗ ಒದಗಿಬರಲಿ ಎಂದು ಆಶಿಸಿದರು.

ಪ್ರಸ್ತುತ ಆರೋಗ್ಯ ಸಮಸ್ಯೆಗಳಿಗೆ ವ್ಯಾಯಾಮ ರಹಿತ ಜೀವನ ಶೈಲಿಯೇ ಮುಖ್ಯ ಕಾರಣ. ಎಳೆ ವಯಸ್ಸಿನಲ್ಲೇ ಕ್ರೀಡೆಯತ್ತ ಮಕ್ಕಳ ಮನಸ್ಸನ್ನು ಸೆಳೆದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು ಇದ್ದಂತೆ. ಕರಾವಳಿಯಲ್ಲಿ ರಾಜ್ಯದ ಪರಂಪರೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡಿದರೆ ಅದು ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್‌ ಮಾತನಾಡಿ, ಈ ಕ್ರೀಡೋತ್ಸವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಶಾರದಾ ವಿದ್ಯಾಲಯ ಆರಂಭವಾಗಿ 33 ವರ್ಷಗಳು ಸಂದಿದ್ದು, ಮೆಕಾಲೆ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಭಾರತೀಯ ಜೀವನ ಮೌಲ್ಯ, ಸಂಸ್ಕಾರಗಳನ್ನು, ಭಾರತೀಯ ಚಿಂತನೆಗಳಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತಿದೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭ ಶಾರದಾ ಸಮೂಹ ಸಂಸ್ಥೆ ವತಿಯಿಂದ ಯದುವೀರ್‌ ಅವರಿಗೆ ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರಚಿಸಿದ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.

ಶಾಸಕರಾದ ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ, ಉದ್ಯಮಿ ನಾಗಾರ್ಜುನ್‌, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್‌ ಪುರಾಣಿಕ್‌, ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಭಟ್‌, ಸುನಂದಾ ಪುರಾಣಿಕ್, ಕರ್ನಾಟಕ ಹೈಕೋರ್ಟ್‌ನ ನ್ಯಾಯವಾದಿ ಅರುಣ್ ಶ್ಯಾಮ್, ಪ್ರದೀಪ ಕುಮಾರ ಕಲ್ಕೂರ, ರಘುನಾಥ ಸೋಮಯಾಜಿ, ಸುಧಾಕರ ರಾವ್ ಪೇಜಾವರ, ಪ್ರೊ. ಲೀಲಾ ಉಪಾಧ್ಯಾಯ, ಸೀತಾರಾಮ ಭಟ್, ಪ್ರಾಂಶುಪಾಲರಾದ ಪ್ರಕಾಶ್ ನಾಯಕ್, ದಯಾನಂದ ಕಟೀಲ್, ಸತ್ಯ ನಾರಾಯಣ ಭಟ್, ವಿದ್ಯಾ ಭಾರತಿಯ ಹಿರಿಯರಾದ ವಸಂತ ಮಾಧವ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ