ಪಾಲಿಕೆ ಕತ್ತಲಲ್ಲಿಟ್ಟು ಮಾರ್ಗಸೂಚಿ ದರ ನಿಗದಿ: ಮಂಗಳೂರು ಮೇಯರ್ ಆರೋಪ

KannadaprabhaNewsNetwork |  
Published : Mar 05, 2024, 01:31 AM IST
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು. | Kannada Prabha

ಸಾರಾಂಶ

ಮಾರ್ಗಸೂಚಿ ದರ ನಿಗದಿ ಮಾಡುವಾಗ ಸ್ಥಳೀಯ ಸಂಸ್ಥೆಯನ್ನು ಏಕೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಜಿಲ್ಲಾ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಸೂಕ್ತ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಆಗಲೂ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಸೇರಿ ಸಿಎಂ ನಿವಾಸದ ಎದುರು ಹೋರಾಟ ಮಾಡುತ್ತೇವೆ ಎಂದು ಮಂಗಳೂರು ಮೇಯರ್‌ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಳೆದ ವರ್ಷ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮಾರ್ಗಸೂಚಿ ದರ ನಿಗದಿ ಮಾಡುವಾಗ ಅಧಿಕಾರಿಗಳು ಪಾಲಿಕೆಯನ್ನು ಕತ್ತಲೆಯಲ್ಲಿಟ್ಟು ನಿಗದಿ ಮಾಡಿದ್ದಾರೆ. ಈ ಕಾರಣದಿಂದಲೇ ಖಾಲಿ ನಿವೇಶನಗಳು, ವಾಣಿಜ್ಯ ಕಟ್ಟಡಗಳ (5 ಅಂತಸ್ತಿಗಿಂತ ಮೇಲೆ) ಆಸ್ತಿ ತೆರಿಗೆ ಭಾರೀ ಏರಿಕೆ ಆಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಕಳೆದ ಸಾಮಾನ್ಯ ಸಭೆಯಲ್ಲಿ 2021ರ ಮಾರ್ಗಸೂಚಿ ದರದ ಆಧಾರದಲ್ಲಿ ಶೇ.3ರಷ್ಟು ಆಸ್ತಿ ತೆರಿಗೆ ಹೆಚ್ಚು ಮಾಡಿ ನಿರ್ಣಯ ಕೈಗೊಂಡಿದ್ದರೂ ಆಯುಕ್ತರು 2023ರ ಮಾರುಕಟ್ಟೆ ದರದ ಆಧಾರದಲ್ಲಿ ತೆರಿಗೆ ವಿಧಿಸಿದ್ದಾರೆ. ಪಾಲಿಕೆಯ ಈ ಹಿಂದಿನ ನಿರ್ಧಾರವನ್ನು ಅನುಷ್ಠಾನ ಮಾಡುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಪತ್ರ ವ್ಯವಹಾರ ನಡೆಸುವುದಾಗಿ ಆಯುಕ್ತರು ತಿಳಿಸಿದ್ದಾರೆ. ಸರ್ಕಾರದ ಕಡೆಯಿಂದ ಯಾವ ನಿರ್ಧಾರವೂ ಆಗದೆ ಇದ್ದರೆ ಹೈಕೋರ್ಟ್‌ಗೆ ರಿಟ್‌ ಪಿಟಿಶನ್‌ ಹಾಕಬೇಕಾಗುತ್ತದೆ ಎಂದರು.ಮಾರ್ಗಸೂಚಿ ದರ ಏರಿಕೆ ಮಾಡುವಾಗ ಪಾಲಿಕೆಯ ಸದಸ್ಯರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಪರಿಗಣಿಸಬೇಕು. ಆದರೆ ಕಳೆದ ವರ್ಷ ಪಾಲಿಕೆ ಹಾಗೂ ಇಬ್ಬರು ಶಾಸಕರ ಗಮನಕ್ಕೆ ತಾರದೆ ಅಧಿಕಾರಿಗಳು ದರ ದುಪ್ಪಟ್ಟು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತೆರಿಗೆ ಏರಿಕೆ ಮಾಡಲಾಗಿದೆ ಎಂದು ಮೇಯರ್ ಆರೋಪಿಸಿದರು.ಪ್ರತಿಭಟನೆ ಎಚ್ಚರಿಕೆ: ಮಾರ್ಗಸೂಚಿ ದರ ನಿಗದಿ ಮಾಡುವಾಗ ಸ್ಥಳೀಯ ಸಂಸ್ಥೆಯನ್ನು ಏಕೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಜಿಲ್ಲಾ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಸೂಕ್ತ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಆಗಲೂ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಸೇರಿ ಸಿಎಂ ನಿವಾಸದ ಎದುರು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಕಳೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪ್ಲೆಕಾರ್ಡ್‌ ಹಿಡಿದು ಪ್ರತಿಭಟನೆ ನಡೆಸಿದ ವಿಪಕ್ಷ ಸದಸ್ಯರು ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರ ಗಮನಕ್ಕೆ ತರಬಹುದಿತ್ತು. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ವಾ ಎಂದು ಪ್ರಶ್ನಿಸಿದರು.---------ನೀರಿನ ರೇಶನಿಂಗ್‌ ಸದ್ಯಕ್ಕಿಲ್ಲಮಹಾನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ 6 ಮೀ. ನೀರು ಈಗಲೂ ಇದೆ. ಈಗಲೂ ಒಳಹರಿವೂ ಇದೆ. ನೀರು ಸಾಕಷ್ಟು ಇರುವುದರಿಂದ ನೀರಿನ ರೇಶನಿಂಗ್‌ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಮೇಯರ್‌ ತಿಳಿಸಿದರು.ಕಳೆದ ವರ್ಷ ಇದೇ ಸಮಯದಲ್ಲಿ 5.9 ಮೀ. ನೀರಿನ ಸಂಗ್ರಹವಿತ್ತು. ಈ ಬಾರಿ 6 ಮೀ.ಗಿಂತ ಒಂದು ಇಂಚೂ ಕಮ್ಮಿಯಾಗಿಲ್ಲ. ಹಾಗೊಂದು ವೇಳೆ ಕಡಿಮೆಯಾದರೆ ಹರೇಕಳ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ತುಂಬೆ ಡ್ಯಾಂ ಕೆಳಗಿನ ನೀರನ್ನು ಪಂಪ್‌ ಮಾಡಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ ಎಂದರು.ಎಎಂಆರ್‌ ಡ್ಯಾಂನಲ್ಲೂ ಸಾಕಷ್ಟು ನೀರು ಇರುವುದರಿಂದ ಕೈಗಾರಿಕೆಗಳಿಗೆ ಈ ಹಿಂದಿನಂತೆ ನೀರು ನೀಡಲಾಗುತ್ತಿದೆ. ಕೈಗಾರಿಕೆಗಳಿಗೂ ರೇಶನಿಂಗ್‌ ಮಾಡುವ ಅಗತ್ಯ ಸದ್ಯಕ್ಕೆ ಕಾಣುತ್ತಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!