ಮಂಗಳೂರು: ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ಪುನಾರಂಭ

KannadaprabhaNewsNetwork |  
Published : Sep 11, 2025, 12:04 AM IST
ರಸ್ತೆ ಬದಿ ಸ್ವಚ್ಛಗೊಳಿಸುತ್ತಿರುವ ಸ್ವಯಂ ಸೇವಕರು. | Kannada Prabha

ಸಾರಾಂಶ

ಮಂಗಳೂರಿನ ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಮಳೆಗಾಲದ ನಂತರ ಪುನಾರಂಭಗೊಂಡಿದ್ದು, ಸೆಪ್ಟೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಭಾನುವಾರ ಕದ್ರಿ ಮುಖ್ಯ ದ್ವಾರದ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯಿತು.

ಮಂಗಳೂರು: ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನ ಮಳೆಗಾಲದ ನಂತರ ಪುನಾರಂಭಗೊಂಡಿದ್ದು, ಸೆಪ್ಟೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಭಾನುವಾರ ಕದ್ರಿ ಮುಖ್ಯ ದ್ವಾರದ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯಿತು.

ಈ ಶ್ರಮದಾನಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಮನೋಹರ್ ಶೆಟ್ಟಿ ಚಾಲನೆ ನೀಡಿದರು.

ಸ್ಯಾಕ್ಸೋಫೋನ್ ವಾದಕ ದಿ.ಕದ್ರಿ ಗೋಪಾಲನಾಥ್ ಸ್ಮಾರಕದಲ್ಲಿದ್ದ ಕಸ ಹಾಗೂ ಅಶುಚಿತ್ವವನ್ನು ನಿವಾರಿಸಲು ಸ್ವಚ್ಛತಾ ಶ್ರಮದಾನ ಸಂದರ್ಭದಲ್ಲಿ ವಿಶೇಷ ಪ್ರಯತ್ನ ನಡೆಸಲಾಯಿತು. ಸ್ಮಾರಕದ ಸುತ್ತಮುತ್ತಲಿನ ಪ್ರದೇಶ ತೀರ ಮಲಿನವಾದ ಕಾರಣ ನೀರಿನ ಟ್ಯಾಂಕ್‌ನ್ನು ತರಿಸಿ ಸಂಪೂರ್ಣ ತೊಳೆಯುವ ಕಾರ್ಯ ನಡೆಯಿತು. ಸ್ವಯಂಸೇವಕರು ಶ್ರಮವಹಿಸಿ ಸ್ಮಾರಕವನ್ನು ಸಂಪೂರ್ಣ ಶುಚಿಗೊಳಿಸಿದರು.

ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ಸ್ಥಳೀಯ ಸಂಘಟನೆಗಳಾದ ಯುವ ಫ್ರೆಂಡ್ಸ್ ಕದ್ರಿ ಮತ್ತು ಕದ್ರಿ ಯೂತ್ ಫ್ರೆಂಡ್ಸ್ ಪ್ರತಿನಿಧಿಗಳು ಈ ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ಬಿ. ಸಾಲ್ಯಾನ್, ಸ್ವಚ್ಛತಾ ಕಾರ್ಯದಲ್ಲಿ ಸಮುದಾಯದ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಸ್ವಚ್ಛ ನಗರ ರೂಪಿಸಲು ಪ್ರತಿಯೊಬ್ಬರೂ ತಮ್ಮ ಮನೆಯ ಹಂತದಲ್ಲಿಯೇ ತ್ಯಾಜ್ಯ ವಿಂಗಡನೆ ಮತ್ತು ಹಸಿಕಸ ನಿರ್ವಹಣೆಯತ್ತ ಗಮನ ಹರಿಸಬೇಕು. ಇದರಿಂದ ಮಾತ್ರ ಮಂಗಳೂರನ್ನು ಸ್ವಚ್ಛ ಮತ್ತು ಹಸಿರು ಮಾಡುವ ಕನಸು ಸಾಕಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ವಚ್ಛ ಮಂಗಳೂರು ಅಭಿಯಾನದ ಹಿರಿಯ ಸ್ವಯಂಸೇವಕರಾದ ಬಾಲಕೃಷ್ಣ ಭಟ್, ಕೆ.ವಿ. ಸತ್ಯನಾರಾಯಣ, ಶಿವರಾಮ, ಉದಯ್ ಕೆ.ಪಿ., ಸೌರಜ್ ಶೆಟ್ಟಿ ಮಂಗಳೂರು, ಯೋಗೇಶ್ ಕಾರ್ಯತಡ್ಕ, ಅವಿನಾಶ್, ಅನಿರುದ್ಧ ನಾಯಕ್, ಡಾ. ಕೃಷ್ಣ ಶರಣ್, ಸುನಂದಾ ಅವರು ಶ್ರಮದಾನದ ಸಂದರ್ಭದಲ್ಲಿ ರಸ್ತೆ ಮತ್ತು ಅದರ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ಕಸದ ಅವಶೇಷಗಳನ್ನು ತೆರವುಗೊಳಿಸಿದರು.

ದಿಲ್ ರಾಜ್ ಆಳ್ವ, ದೇವಿಪ್ರಸಾದ್ ಮತ್ತು ರಕ್ಷಿತ್ ಕದ್ರಿ ನೇತೃತ್ವದ ಮತ್ತೊಂದು ತಂಡ ಮಲ್ಲಿಕಟ್ಟೆ ಪಾರ್ಕ್ ಹಾಗೂ ಶ್ರೀ ಕದ್ರಿ ಗೋಪಾಲನಾಥ್ ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿತು. ಪ್ಲಾಸ್ಟಿಕ್ ತ್ಯಾಜ್ಯಗಳ ಜತೆಗೆ ಗಿಡಗಂಟಿಗಳನ್ನೂ ತೆರವುಗೊಳಿಸಿ ಸುಂದರ ವಾತಾವರಣ ನಿರ್ಮಾಣಕ್ಕೆ ಕಾರಣರಾದರು. ಇವರೊಂದಿಗೆ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಧ್ಯಾಪಕರಾದ ಡಾ. ರಾಕೇಶ್ ಕೃಷ್ಣ, ಡಾ. ರುಚಿತಾ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ