ಕನ್ನಡಪ್ರಭ ವಾರ್ತೆ ಮಂಗಳೂರು
ಕುಡಿಯುವ ನೀರಿನ ಕೊರತೆ ಕಂಡುಬಂದಿರುವ ಪ್ರದೇಶಗಳಿಗೆ ಆದ್ಯತೆಯ ನೆಲೆಯಲ್ಲಿ ನೀರು ಪೂರೈಸಲು ಹೆಚ್ಚುವರಿ 10 ಟ್ಯಾಂಕರ್ ವ್ಯವಸ್ಥೆ ಮಾಡಲು ಸೋಮವಾರ ನಡೆದ ಪಾಲಿಕೆಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಕುರಿತ ವಿಶೇಷ ಸಭೆ ನಡೆಯಿತು. ತುಂಬೆಯಿಂದ ನಗರಕ್ಕೆ ಪೂರೈಕೆಯಾಗುವ ನೀರಿನ ಕೊಳವೆಯಿಂದ ನೀರು ಕದಿಯುತ್ತಿರುವ ಅನಧಿಕೃತ ನೀರಿನ ಸಂಪರ್ಕಗಳನ್ನು ಕತ್ತರಿಸಲು ಅಧಿಕಾರಿಗಳ ತಂಡ ನಿಯೋಜನೆ ಮಾಡುವುದು, ಕಡಿತಗೊಳಿಸಿದ ಅನಧಿಕೃತ ನೀರಿನ ಸಂಪರ್ಕಗಳನ್ನು ಮರು ಜೋಡಿಸಿಕೊಂಡವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಅಡ್ಯಾರು, ಅರ್ಕುಳ, ಫರಂಗಿಪೇಟೆ, ವಳಚ್ಚಿಲ್, ಮಾರಿಪಳ್ಳ ಮುಂತಾದೆಡೆ ಕಲ್ಯಾಣ ಮಂಟಪ, ಅಪಾರ್ಟ್‌ಮೆಂಟ್ ಸಹಿತ ವಾಣಿಜ್ಯ ಕಟ್ಟಡಗಳಿಗೆ ಮುಖ್ಯ ಕೊಳವೆಗೆ ಕನ್ನ ಹಾಕಿ ಅನಧಿಕೃತ ಸಂಪರ್ಕ ಮಾಡಿಕೊಂಡಿದ್ದಾರೆ. ಇದೇ ನೀರಿನ ಕೊರತೆಗೆ ಮುಖ್ಯ ಕಾರಣ ಎಂದು ಪಾಲಿಕೆ ಸದಸ್ಯರು ಹೇಳಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ 70 ಅನಧಿಕೃತ ಸಂಪರ್ಕಗಳನ್ನು ಕತ್ತರಿಸಲಾಗಿದೆ. ಆದರೆ ಕತ್ತರಿಸಿದ ಅನಧಿಕೃತ ಸಂಪರ್ಕಗಳನ್ನು ಹಲವರು ಮರುಜೋಡಿಸಿಕೊಂಡಿದ್ದಾರೆ. ಅನಧಿಕೃತ ಸಂಪರ್ಕವನ್ನು ಮರು ಜೋಡಿಸಿಕೊಂಡವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಮೇಯರ್ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.ಉಪಮೇಯರ್ ಸುನಿತಾ, ಆಯುಕ್ತ ಆನಂದ್ ಸಿ.ಎಲ್. ಇದ್ದರು.ಪಡೀಲ್ ಬಳಿಯ ನಾಗುರಿಯ ಮುಖ್ಯ ಲೈನ್ ತೊಂದರೆಗೆ ಮೊದಲೇ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ತಲೆದೋರಿತ್ತು. ನಗರದ ಕಾರ್‌ಸ್ಟ್ರೀಟ್, ಕದ್ರಿ, ದೇರೇಬೈಲ್ ಮತ್ತಿತರ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದು ಈಗಲೂ ಮುಂದುವರಿದಿದೆ. ಈ ನಡುವೆ ನಾಗುರಿಯಲ್ಲಿ ಮುಖ್ಯ ಪೈಪ್‌ಲೈನ್ ತೊಂದರೆಗೆ ಒಳಗಾಗಿದ್ದು, ಅದು ದುರಸ್ತಿಯಾದರೂ ಇನ್ನೂ ನೀರು ಪೂರೈಕೆ ಸಮರ್ಪಕವಾಗಿಲ್ಲ. ಹೀಗಾಗಿ ಬಿರು ಬೇಸಗೆ ಮೊದಲೇ ಮಂಗಳೂರಲ್ಲಿ ನೀರಿಗೆ ಹಾಹಾಕಾರ ತಲೆದೋರುವ ಸಾಧ್ಯತೆ ದಟ್ಟವಾಗಿದೆ.
ಅಧಿಕಾರಿಗಳ ಕೊರತೆ:ಪಾಲಿಕೆಯ ನೀರಾವರಿ ವಿಭಾಗದ ಕಾರ್ಯಪಾಲ ಅಭಿಯಂತರರು ಎಂಜಿನಿಯರ್ ವರ್ಗಾವಣೆಯಾಗಿದ್ದು, ಅವರಿಗೆ ಬೇರೆ ಸ್ಥಳ ತೋರಿಸಿಲ್ಲ. ಅವರಿಂದ ತೆರವಾದ ಸ್ಥಾನಕ್ಕೆ ಕಾಯಂ ನೇಮಕವಾಗಿಲ್ಲ. ಹೀಗಾಗಿ ಪ್ರಭಾರವಾಗಿ ಸಹಾಯಕ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಬೇಕಾಗಿದೆ. ಅವರಿಗೆ ಅನುಭವದ ಕೊರತೆ, ಜತೆಗೆ ನೀರು ಪೂರೈಕೆಯ ಸಮಗ್ರ ವ್ಯವಸ್ಥೆಯ ಮಾಹಿತಿ ಕೊರತೆಯೂ ಕಾರಣವಾಗಿದೆ. ಇದು ಸುಗಮ ನೀರು ಪೂರೈಕೆಗೆ ಅಡ್ಡಿಯಾಗಿದೆ.