ಮುಂಡಗೋಡದ ವಸತಿ ಶಾಲೆಯ 100 ವಿದ್ಯಾರ್ಥಿಗಳಿಗೆ ಮಂಗನಬಾವು

KannadaprabhaNewsNetwork |  
Published : Nov 22, 2024, 01:18 AM IST
ಇಂದಿರಾಗಾಂಧಿ ವಸತಿ ಶಾಲೆಗೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಗನಬಾವು ಸೋಂಕು ಮತ್ತಷ್ಟು ಮಕ್ಕಳಿಗೆ ವ್ಯಾಪಿಸುವ ಸಾಧ್ಯತೆ ಇದೆ.

ಮುಂಡಗೋಡ: ಪಟ್ಟಣದ ಬೃಂದಾವನ ವಸತಿ ಬಡಾವಣೆಯ ಇಂದಿರಾಗಾಂಧಿ ವಸತಿ ಶಾಲೆಯ ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಏಕಾಏಕಿ ಮಂಗನಬಾವು ಕಾಣಿಸಿಕೊಂಡಿದೆ.ಈ ವಸತಿ ಶಾಲೆಯಲ್ಲಿ ೬ರಿಂದ ೧೦ನೇ ತರಗತಿವರೆಗೆ ಒಟ್ಟು ೨೦೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸುಮಾರು ೫೦ ವಿದ್ಯಾರ್ಥಿಗಳಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಗುರುವಾರ ಮತ್ತೆ ೫೦ಕ್ಕೂ ಅಧಿಕ ಮಕ್ಕಳಲ್ಲಿ ಗಂಟಲು ನೋವು ಹಾಗೂ ಬಾವು ಕಾಣಿಸಿಕೊಂಡಿದ್ದು, ಮಂಗನಬಾವು ಕಾಯಿಲೆ ಎಂಬುದು ದೃಢಪಟ್ಟಿದೆ. ಇದು ವಸತಿ ಶಾಲೆಯ ಬಹುತೇಕ ವಿದ್ಯಾರ್ಥಿಗಳಿಗೆ ಹಬ್ಬಿದ್ದು, ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ.ಮಂಗನಬಾವು ಕಾಣಿಸಿಕೊಂಡಿದ್ದ ಕೆಲವು ಮಕ್ಕಳಿಗೆ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಗನಬಾವು ಸೋಂಕು ಮತ್ತಷ್ಟು ಮಕ್ಕಳಿಗೆ ವ್ಯಾಪಿಸುವ ಸಾಧ್ಯತೆ ಇದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಶಿರಸಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿತ ಹುತ್ಗಾರದ ಕೃಷ್ಣಾ ನಾಗಪ್ಪ ಮೊಗೇರ(೩೦) ಬಂಧಿತ ವ್ಯಕ್ತಿ. ಈತ ನ. ೨೦ರಂದು ಬೆಳಗ್ಗೆ ೮.೩೦ ಗಂಟೆಗೆ ಹುತ್ಗಾರದ ಕಿರಿಯ ಪ್ರಾಥಮಿಕ ಶಾಲೆಯ ಬಳಿ ಬಂದು ಬಾಲಕಿ ಒಬ್ಬಳೇ ಇರುವುದನ್ನು ನೋಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಕ್ಲಿನಿಕ್ ನಡೆಸುತ್ತಿದ್ದವರಿಗೆ ನೋಟಿಸ್‌

ಭಟ್ಕಳ: ತಾಲೂಕಿನಲ್ಲಿ ನಕಲಿ ಕ್ಲಿನಿಕ್ ಗಳನ್ನು ನಡೆಸಲಾಗುತ್ತಿದೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆಯ(ಕೆಪಿಎಂಇ) ಜಿಲ್ಲಾ ನೋಡಲ್ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ಅವರ ನೇತೃತ್ವದ ತಂಡ ಕೆಲವು ಕ್ಲಿನಿಕ್‌ಗಳ ಮೇಲೆ ಕಾರ್ಯಾಚರಣೆ ನಡೆಸಿ ದಾಖಲೆ ಪರಿಶೀಲಿಸಿತು.ಪಟ್ಟಣದ ನೆಹರು ರೋಡಿನಲ್ಲಿರುವ ಕ್ಲಿನಿಕ್ ಪರಿಶೀಲಿಸಿದಾಗ ಅಲ್ಲಿ ಯಾವುದೇ ದಾಖಲೆ ಮತ್ತು ವೈದ್ಯರಿಗೆ ಸಂಬಂಧಿಸಿದ ಪದವಿ ಇಲ್ಲದ ಕಾರಣ ಅವರ ಕ್ಲಿನಿಕ್ ನ್ನು ಜಪ್ತಿ ಮಾಡಲಾಯಿತು. ಅದರಂತೆ ಸರ್ಪನಕಟ್ಟೆಯಲ್ಲಿದ್ದ ಕ್ಲಿನಿಕ್‌ವೊಂದರ ದಾಖಲೆ ಪರಿಶೀಲಿಸಿದ ತಂಡ ಅಲ್ಲಿ ಬಯೋ ಮೆಡಿಕಲ್ ವೆಸ್ಟ್ ಸರಿಯಿಲ್ಲದ ಕಾರಣ ನೋಟಿಸ್‌ ನೀಡಿದೆ.ಹೆಬಳೆ ಹೆರ್ತಾರನಲ್ಲಿರುವ ಕ್ಲಿನಿಕ್‌ಗೆ ತೆರಳಿ ದಾಖಲೆ ಪರಿಶೀಲಿಸಿದ ತಂಡ ಹೋಮಿಯೋಪತಿ ವೈದ್ಯರು ಅಲೋಪತಿ ಔಷಧಿ ನೀಡುತ್ತಿದ್ದ ಬಗ್ಗೆ ನೋಟಿಸ್‌ ನೀಡಿದರು. ತಂಡದ ಜತೆ ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಉಪಸ್ಥಿತರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ