ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಸಯ್ಯದ್ ನಾಸೀರ್ ಹುಸೇನ್ ವಿಜಯೋತ್ಸವದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪದ ಹಿನ್ನೆಲೆಯಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಬಿಜೆಪಿ ಯುವ ಮೋರ್ಚಾ ಉದ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಕಾಂಗ್ರೆಸ್ ಕಚೇರಿ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಕೆಎಸ್ಸಾರ್ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಸುಮಾರು 10 ಗಂಟೆ ವೇಳೆಗೆ ಆಗಮಿಸಿದ ಯುವ ಮೋರ್ಚಾ ಕಾರ್ಯಕರ್ತರು ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಮುತ್ತಿಗೆ ಹಾಕಲು ಯತ್ನಿಸಿದರು. ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಒಳಹೋಗಲು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಚಕಮಕಿ ನಡೆಯಿತು.
ಕೊನೆಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನೂ ವಾಹನದಲ್ಲಿ ತುಂಬಿಸಿ ಕರೆದೊಯ್ದರು. ಸಂಜೆಯವರೆಗೂ ಕಾಂಗ್ರೆಸ್ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.