ತಾಸೆಯ ಪೆಟ್ಟಿಗೆ ‘ಪಿಲಿನಲಿಕೆ’ ರೋಚಕ ಪ್ರದರ್ಶನ

KannadaprabhaNewsNetwork | Published : Oct 13, 2024 1:11 AM

ಸಾರಾಂಶ

ಪಿಲಿನಲಿಕೆಗೆ ಕ್ರಿಕೆಟಿಗ ಶಿವಂ ದುಬೆ, ಸಿನಿ ತಾರೆಯರಾದ ರಿಷಬ್‌ ಶೆಟ್ಟಿ, ಡಾಲಿ ಧನಂಜಯ್‌, ರಾಜ್‌ ಶೆಟ್ಟಿ, ಬಾಲಿವುಡ್‌ ನಟ ಅಹನ್‌ ಶೆಟ್ಟಿ ಮತ್ತಿತರರು ಆಗಮಿಸಿ ಪ್ರೇಕ್ಷಕರ ಮನರಂಜಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯುವ ನಾಯಕ ಮಿಥುನ್‌ ರೈ ನೇತೃತ್ವದ ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ವತಿಯಿಂದ 9ನೇ ವರ್ಷದ ‘ಪಿಲಿನಲಿಕೆ’ ಹುಲಿವೇಷ ಸ್ಪರ್ಧೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ವೈಭವದಿಂದ ನಡೆಯಿತು. ಹುಲಿವೇಷ ತಂಡಗಳ ರೋಮಾಂಚಕ ಸ್ಟೆಪ್ಸ್‌ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.

ತಾಸೆಯ ಪೆಟ್ಟಿಗೆ ಹುಲಿ ವೇಷ ತಂಡಗಳು ವಿಭಿನ್ನ ಪ್ರದರ್ಶನ ನೀಡಿ ರಂಜಿಸಿದವು. ವಿವಿಧೆಡೆಗಳ ಒಟ್ಟು 11 ತಂಡಗಳು ಇದರಲ್ಲಿ ಪಾಲ್ಗೊಂಡಿದ್ದವು. ವಿವಿಧ ವಿಭಾಗಗಳಲ್ಲಿ ತಡರಾತ್ರಿಯವರೆಗೂ ಸ್ಪರ್ಧೆ ನಡೆಯಿತು. ಪ್ರತಿ ತಂಡಕ್ಕೆ ವೇದಿಕೆಯಲ್ಲಿ ಪ್ರದರ್ಶನ ನೀಡಲು 20 ನಿಮಿಷಗಳ ಕಾಲಾವಕಾಶ ನೀಡಲಾಯಿತು.ಪ್ರಥಮ ಸ್ಥಾನಿ ತಂಡ ಬಹರೇನ್‌ಗೆ: ಪಿಲಿನಲಿಕೆಯಲ್ಲಿ ಪ್ರಥಮ ಸ್ಥಾನ ಪಡೆವ ತಂಡ ಡಿಸೆಂಬರ್ 16ರಂದು ನಡೆಯುವ ಬಹ್ರೇನ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲಿದೆ. ಮಾತ್ರವಲ್ಲದೆ, ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತಿ ತಂಡದಲ್ಲಿ ಒಬ್ಬೊಬ್ಬ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಅವರ ಶಿಕ್ಷಣಕ್ಕೆ 25 ಸಾವಿರದಿಂದ 1 ಲಕ್ಷ ರು.ವರೆಗೆ ವಿದ್ಯಾನಿಧಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಮಿಥುನ್‌ ರೈ ಈ ವೇಳೆ ಪ್ರಕಟಿಸಿದರು.

ತಾರಾ ಮೆರುಗು: ಪಿಲಿನಲಿಕೆಗೆ ಕ್ರಿಕೆಟಿಗ ಶಿವಂ ದುಬೆ, ಸಿನಿ ತಾರೆಯರಾದ ರಿಷಬ್‌ ಶೆಟ್ಟಿ, ಡಾಲಿ ಧನಂಜಯ್‌, ರಾಜ್‌ ಶೆಟ್ಟಿ, ಬಾಲಿವುಡ್‌ ನಟ ಅಹನ್‌ ಶೆಟ್ಟಿ ಮತ್ತಿತರರು ಆಗಮಿಸಿ ಪ್ರೇಕ್ಷಕರ ಮನರಂಜಿಸಿದರು.

ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್‌ ಕುಮಾರ್‌ ಶೆಟ್ಟಿ, ಮಾರ್ಸ್ಕ್‌ ಸಂಸ್ಥೆ ಸಿಇಒ ಗೌತಮ್‌ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್‌, ಕಾರ್ಪೊರೇಟರ್‌ ಪ್ರವೀಣ್‌ಚಂದ್ರ ಆಳ್ವ, ನಮ್ಮ ಟಿವಿ ನಿರ್ದೇಶಕ ಶಿವಚರಣ್ ಶೆಟ್ಟಿ, ಡಾ.ದೇವದಾಸ್‌ ಕಾಪಿಕಾಡ್‌, ವೆಂಕಟೇಶ ಭಟ್‌ ಮತ್ತಿತರರು ಇದ್ದರು.

Share this article