ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ಮಾವು ಬೆಳೆಗೆ ಕೀಟ ಬಾಧೆ, ಬೂದಿ ರೋಗ, ಜೋನಿ, ಹವಾಮಾನ ವೈಪರೀತ್ಯದಿಂದ ಹಾನಿಯಾಗಿರುವ ಬಗ್ಗೆ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‌ನ ಪದಾಧಿಕಾರಿಗಳು ಮಾವು ಬೆಳೆಗಾರರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಮಾವು ಬೆಳೆಗೆ ಕೀಟ ಬಾಧೆ. ಬೂದಿ ರೋಗ, ಜೋನಿ, ಹವಾಮಾನ ವೈಪರೀತ್ಯದಿಂದ ಪ್ರಸಕ್ತ ಸಾಲಿನ ಬೆಳೆಯು ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ ಹಾನಿಗೀಡಾಗಿದ್ದು, ಮಾವು ಬೆಳೆಗಾರರಿಗೆ ತೀವ್ರ ಸ್ವರೂಪದ ಆರ್ಥಿಕ ನಷ್ಟು ಉಂಟಾಗಿದೆ. ಇದನ್ನು ಪರಿಗಣಿಸಿ ಜಿಲ್ಲಾವಾರು ಜಂಟಿ ಸಮೀಕ್ಷೆ ನಡೆಸಿ ಆಗಿರುವ ಬೆಳೆ ನಷ್ಟಕ್ಕೆ 1 ಹೆಕ್ಟೇರ್‌ಗೆ 60 ಸಾವಿರ ರು. ಗಳ ಪರಿಹಾರ ಕೊಡಬೇಕೆಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಇಷ್ಟೇ ಅಲ್ಲದೆ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ಒಟ್ಟು 27,639 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಮಾವು ಬೆಳೆಯಲ್ಲಿ ಹೂವು ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾತಾವರಣದ ವೈಪರೀತ್ಯದಿಂದ ಬೂದಿ ರೋಗ (Powdery Mildew), ಜೋನಿ ಕೀಟ (Plant hopper), ನುಸಿ ಕೀಟಗಳ (Thrips) ಹಾನಿಯು ಹೆಚ್ಚಾಗಿ ಕಂಡುಬಂದಿದೆ. ತೇವಾಂಶ ಕೊರತೆಯಿಂದ ಹೂವು ಒಣಗಿ ಪ್ರಸಕ್ತ ಸಾಲಿನ ಮಾವಿನ ಬೆಳೆಯು ಹಾನಿಗೊಳಗಾಗುತ್ತಿದೆ ಎಂದು ತಿಳಿಸಿದ್ದಾರೆ.