ರಾಮನಗರ: ಹವಾಮಾನ ಬದಲಾವಣೆ ಸರಿಯಾದ ರೀತಿಯಲ್ಲಿ ತೋಟಗಳ ನಿರ್ವಹಣೆ ಮಾಡದಿರುವುದು, ಮುಂಗಾರು ಮಳೆ ಕೊರತೆ, ಚಿಗುರಿನ ಪರಿಣಾಮದಿಂದ ಹಲವು ಕಡೆಗಳಲ್ಲಿ ಹೂ ವಿಳಂಬವಾಗುತ್ತಿದೆ. ಇದರಿಂದ ಫೆಬ್ರವರಿಯಲ್ಲಿ ಕಾಣಬೇಕಿರುವ ಹಣ್ಣು ಮಾರ್ಚ್, ಏಪ್ರಿಲ್ ವರೆಗೆ ವಿಸ್ತರಣೆ ಕಾಣುತ್ತಿದೆ ಎಂದು ಕೃಷಿ ವಿಜ್ಞಾನಿ ಡಾ. ರಾಜೇಂದ್ರ ಪ್ರಸಾದ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಬಳಿಯ ರೈತರ ತೋಟದಲ್ಲಿ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಯಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಲಕಾಲಕ್ಕೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಮಾವು ಮರಗಳಿಗೆ ಔಷಧಿ, ಗಿಡಗಳ ನಿರ್ವಹಣೆ, ಮುಂತಾದ ಮಾಹಿತಿ ಪಡೆದು ಜೊತೆಗೆ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಪ್ರಯೋಜನ ಪಡೆದುಕೊಂಡು ಮಾವು ಬೆಳೆಯಲ್ಲಿ ಯಶಸ್ಸು ಕಾಣಬೇಕು ಎಂದು ರೈತರ ಪ್ರಶ್ನೆಗಳಿಗೆ ಉತ್ತರಿಸಿ ಯಾವ ಕಾಲಕ್ಕೆ ಯಾವ ಔಷಧ ಸಿಂಪಡಣೆ ಮಾಡಬೇಕು ರೋಗ ಹತೋಟಿ ಕ್ರಮದ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲೆಯಲ್ಲಿ ಮಾವಿನ ಹೂ ಪ್ರಥಮವಾಗಿ ಕಾಣುತ್ತದೆ ಜೊತೆಗೆ ಬೇಗನೆ ಫಸಲು ಮಾರುಕಟ್ಟೆ ಪ್ರವೇಶಿಸುತ್ತದೆ ಇದರಿಂದ ರೈತರಿಗೆ ಉತ್ತಮ ಮಾರುಕಟ್ಟೆ ಹೆಚ್ಚಿನ ಲಾಭ ಸಿಗುತ್ತದೆ. ರೈತರು ಮಾವು ಫಸಲು ಕಟಾವು ಆದ ನಂತರ ಭೂಮಿಯನ್ನು ಉಳುಮೆ ಮಾಡಿ ಬಿಡಬೇಕು ಇದರಿಂದ ಮುಂದಿನ ಫಸಲು ಉತ್ತಮವಾಗಿ ಬಂದು ಯಾವುದೇ ರೋಗ ಸಮಸ್ಯೆ ಕಾಣುವುದಿಲ್ಲ. ಕಾಲಕಾಲಕ್ಕೆ ತಕ್ಕಂತೆ ಮಳೆಗಾಲದಲ್ಲಿ ಗಿಡಕ್ಕೆ ನೀರು ಇಂಗುವ ರೀತಿಯಲ್ಲಿ ಪಾತಿ ಮಾಡಿ ಗೊಬ್ಬರ ಹಾಕಿ ಸೂಕ್ತ ಔಷಧೋಪಚಾರ ಮಾಡಿದರೆ ಜೋನಿ, ಹೂ ಉದುರುವುದು ಸೇರಿದಂತೆ ಇನ್ನಿತರ ರೋಗಭಾಧೆ ತಡೆಗಟ್ಟಬಹುದು ಎಂದು ರಾಜೇಂದ್ರ ಪ್ರಸಾದ್ ಹೇಳಿದರು.ತೋಟಗಾರಿಕೆ ಇಲಾಖೆ ಕೃಷಿ ಅಧಿಕಾರಿ ರವಿ, ಗ್ರಾಪಂ ಉಪಾಧ್ಯಕ್ಷ ಚಿಕ್ಕಸ್ವಾಮಿ, ಸದಸ್ಯರಾದ ಮಲ್ಲೇಶ್, ಗೋವಿಂದರಾಜು, ರೈತ ಮುಖಂಡರಾದ ವೆಂಕಟಪ್ಪ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
22ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿಯ ರೈತರ ತೋಟದಲ್ಲಿ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಯಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.