ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿರುವ ಮಾವಿನ ಹಣ್ಣುಗಳು । ತಾಲೂಕಿನಲ್ಲಿ ಇಳುವರಿ ಕುಂಠಿತಶಿವಮೂರ್ತಿ ಇಟಗಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಹಣ್ಣುಗಳ ರಾಜ ಮಾವು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಗ್ರಾಹಕರು ವಿವಿಧ ತಳಿಯ ಹಣ್ಣಿನ ಖರೀದಿಗೆ ಮುಂದಾಗಿದ್ದಾರೆ.
ಪಟ್ಟಣದ ಮಾರುಕಟ್ಟೆಯಲ್ಲಿ ಆಪೂಸ್, ಮಲ್ಲಿಕಾ, ಮಲಗೋವಾ, ರಸಪುರಿ ಹಾಗೂ ಬಾದಾಮಿ ಹೀಗೆ ವಿವಿಧ ತಳಿಯ ಹಣ್ಣುಗಳು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಬಾದಾಮಿ ಇಳುವರಿ ಮತ್ತು ಫಸಲು ತೀರಾ ಕಡಿಮೆ ಆಗಿದೆ. ಆದರೂ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ವಿವಿಧ ತಳಿಯ ಹಣ್ಣುಗಳು:
ಪಟ್ಟಣದ ಬಸ್ ನಿಲ್ದಾಣದ ಹತ್ತಿರ, ಕನಕದಾಸ ವೃತ್ತ, ಖಾದಿ ಗ್ರಾಮೋದ್ಯೋಗ ಜಾಗ, ಕನ್ನಡ ಕ್ರಿಯಾ ಸಮಿತಿ ವೃತ್ತ, ವಿಜಯದುರ್ಗಾ ದೇವಸ್ಥಾನ, ಚನ್ನಮ್ಮ ವೃತ್ತದ ಕೂಟಗಳಲ್ಲಿ ವ್ಯಾಪಾರಸ್ಥರು ಬಗೆಬಗೆಯ ಹಣ್ಣು ಇಟ್ಟುಕೊಂಡು ಭರ್ಜರಿ ವ್ಯಾಪಾರ ಆರಂಭ ಮಾಡಿದ್ದು, ಮಾವಿನ ಹಣ್ಣುಗಳು ಜನರನ್ನು ಕೈ ಬಿಸಿ ಕರೆಯುತ್ತಿವೆ.ಮಲಗೋವಾ ೧ ಕೆಜಿಗೆ ೭೦ರಿಂದ ೮೦, ಕಲ್ಮಿ ೯೦, ಆಪೂಸ್ ೧೧೦, ಮಲ್ಲಿಕಾ 110 ದರದಲ್ಲಿ ಲಭ್ಯವಿದೆ.
ಇಳುವರಿ ಇಲ್ಲ:ಪಟ್ಟಣದ ಮಾರುಕಟ್ಟೆಗೆ ಗದಗ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಕೊಪ್ಪಳ ಸೇರಿದಂತೆ ಬೇರೆ ಜಿಲ್ಲೆಗಳಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷಕ್ಕಿಂತಲೂ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮಾವಿನ ಫಸಲು ತಾನಾಗಿಯೇ ನೆಲಕ್ಕೆ ಕಳಚಿ ಬೀಳುತ್ತಿವೆ. ಇದರಿಂದ ಇಳುವರಿಯೂ ಕಡಿಮೆ ಆಗಿದೆ. ತೋಟಗಾರಿಗೆ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಸಾಕಷ್ಟು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ ತಾಲೂಕಿನ ನಾನಾ ಗ್ರಾಮಗಳಲ್ಲಿಯೂ ಹೆಚ್ಚು ಮಾವು ಇಳುವರಿ ಕಂಡು ಬರುತ್ತಿಲ್ಲ. ತರಹೇವಾರಿ ಮಾವಿನ ಹಣ್ಣುಗಳು ಜನರನ್ನು ಆಕರ್ಷಿಸುತ್ತಿವೆ. ಗ್ರಾಹಕರು ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಮಾವಿನ ಕಾಯಿ ಹಣ್ಣಾಗಿಸಲು ಕ್ಯಾಲ್ಸಿಯಂ, ಕಾರ್ಬೈಡ್, ರಾಸಾಯನಿಕ ಬಳಸುತ್ತಿರುವುದು. ಇದು ಮನುಷ್ಯನ ಆರೋಗ್ಯಕ್ಕೆ ಹಾನಿಕಾರ ಎಂದು ತಜ್ಞರೇ ಹೇಳಿದ್ದಾರೆ. ಮಾವಿನ ಕಾಯಿ ಹಣ್ಣು ಮಾಡಲು ಬತ್ತದ ಹುಲ್ಲು ಬಳಸಲಾಗುತ್ತದೆ. ಅದಕ್ಕೆ ಸುಮಾರು ಒಂದು ವಾರ ಬೇಕಾಗುತ್ತದೆ. ಆದರೆ ಮಾವು ಬೆಳೆಗಾರರು ಮತ್ತು ವ್ಯಾಪಾರಸ್ಥರು ಲಾಭದ ಆಸೆಗಾಗಿ ಅಡ್ಡ ದಾರಿ ಹಿಡಿದಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಿದೆ. ರಾಸಾಯನಿಕ ಬಳಸಿದ ಹಣ್ಣು ತಿಂದರೆ ಗಂಟಲು ಕೆರೆತ, ಕೆಮ್ಮು ಬರಲಿದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ ಎನ್ನುತ್ತಾರೆ ಸಿಡಿಪಿಒ ಬೆಟದಪ್ಪ ಮಾಳೇಕೊಪ್ಪ.ಕಳೆದ ವರ್ಷ ಮಾರುಕಟ್ಟೆಗೆ ಮಾವಿನ ಹಣ್ಣು ಬೇಗ ಬಂದಿದ್ದರಿಂದ ವ್ಯಾಪಾರ ಚೆನ್ನಾಗಿತ್ತು. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಗಾಳಿಗೆ ಫಸಲು ನಾಶವಾಗಿದೆ. ಬಿಸಿಲು ಹೆಚ್ಚು ಇರುವುದರಿಂದ ಜನರು ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಇನ್ನೂ ಒಂದೆರೆಡು ದೊಡ್ಡ ಮಳೆ ಬಿದ್ದ ನಂತರವೇ ಹಣ್ಣು ತಿನ್ನುವುದು ರೂಢಿ ಎನ್ನುತ್ತಾರೆ ಮಾವಿನ ವ್ಯಾಪಾರಿ ಹನುಮಂತಪ್ಪ ಹರಿಜನ.