ಸಂತೋಷ ದೈವಜ್ಞ
ಮುಂಡಗೋಡ: ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಾವಿನ ಬೆಲೆಯಲ್ಲಿ ಭಾರೀ ಕುಸಿತವಾಗಿರುವುದು ಒಂದು ಕಡೆಯಾದರೆ, ನಿರಂತರ ಮಳೆಯ ಕಾಟದಿಂದ ಅರ್ಧ ಬೆಳೆ ಹಾನಿಯಾಗುತ್ತಿದೆ. ಇದರಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.ಆರಂಭದಲ್ಲಿ ಆಪೂಸ್, ಪೈರಿ, ಕರಿ ಇಷಾಡ, ಮಾನಕೂರ ಮುಂತಾದ ಉತ್ತಮ ತಳಿಯ ಮಾವಿಗೆ ಉತ್ತಮ ಬೆಲೆ ಇತ್ತು. ಆದರೆ ಈಗ ಎಲ್ಲ ಕಡೆಯಿಂದ ಮಾವಿನ ಫಸಲು ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾವಿನ ದರದಲ್ಲಿ ಕುಸಿತ ಕಂಡಿದೆ.
ರಫ್ತು ಸ್ಥಗಿತ:ತೊಟ್ಟು ಸಮೇತ ಉತ್ತಮ ದರ್ಜೆಯ ಮಾವಿನ ಕಾಯಿಯನ್ನು ರಫ್ತು ಮಾಡಲಾಗುತ್ತದೆ. ಪ್ರತಿ ಬಾರಿ ಮಾವಿನ ಸುಗ್ಗಿ ಪ್ರಾರಂಭವಾಗುತ್ತಿದ್ದಂತೆ ಪಾಳಾ ಹೋಬಳಿ ಭಾಗದ ಮಾವಿನ ಮಂಡಿಗಳ ಮೂಲಕ ನಿತ್ಯ ಲಾರಿಗಳಲ್ಲಿ ವಿವಿಧ ರಾಜ್ಯದ ಪಾನೀಯ ಕಂಪನಿಗಳಿಗೆ ರಫ್ತು ಮಾಡಲಾಗುತ್ತದೆ. ಆರಂಭದಲ್ಲಿ ಆಪೂಸ್ ಮಾವಿನಕಾಯಿ ಕೆಜಿಗೆ ₹೭೦ರಿಂದ ₹೮೦ ಇದ್ದ ದರ ಈಗ ₹೩೦ಕ್ಕೆ ಇಳಿದಿದೆ. ಇದು ಮಾವು ಬೆಳೆಗಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಇದರಿಂದಾಗಿ ಬಹುತೇಕ ಮಾವು ಬೆಳೆಗಾರರು ಮಾವನ್ನು ಹಣ್ಣುಗೊಳಿಸಿ ರಸ್ತೆ ಪಕ್ಕದಲ್ಲಿಯೇ ಪ್ಯಾಪಾರ ನಡೆಸಿದ್ದಾರೆ. ಪಾಳಾ ಹೊರ ವಲಯದ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಪಕ್ಕದಲ್ಲಿಯೇ ಹತ್ತಾರು ಕಡೆಗಳಲ್ಲಿ ಮಾವಿನ ಹಣ್ಣಿನ ವ್ಯಾಪಾರ ಮಾಡಲಾಗುತ್ತಿದೆ.ಬೆಲೆ ಕುಸಿತ:
ಮಾರುಕಟ್ಟೆಯಲ್ಲೂ ಮಾವಿನ ಹಣ್ಣಿಗೆ ಯೋಗ್ಯ ಬೆಲೆ ಲಭಿಸುತ್ತಿಲ್ಲ. ಆರಂಭದಲ್ಲಿ ಉತ್ತಮ ಜಾತಿಯ ಡಜನ್ ಮಾವಿನಹಣ್ಣಿಗೆ ₹೨೫೦ರಿಂದ ₹೩೫೦ ಇದ್ದ ದರ ಈಗ ₹೧೦೦ಕ್ಕೆ ಇಳಿದಿದೆ. ಇನ್ನುಳಿದ ಜವಾರಿ ಹಣ್ಣಿನ ದರ ₹೫೦-೬೦ ಆಗಿದೆ. ಇದರಿಂದ ಲಾಭಾಂಶದ ಕೊರತೆಯಿಂದ ವ್ಯಾಪಾರಸ್ಥರು ಕೂಡ ಕುಗ್ಗಿ ಹೋಗಿದ್ದಾರೆ.ಭತ್ತ ಪ್ರಧಾನ ಪ್ರದೇಶವಾಗಿರುವ ಪಾಳಾ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿ ಸಾಕಷ್ಟು ಪ್ರಮಾಣದಲ್ಲಿ ರೈತರು ಮಾವಿನ ತೋಪುಗಳನ್ನು ಮಾಡಿಕೊಂಡಿದ್ದಾರೆ. ವರ್ಷದ ೨-೩ ತಿಂಗಳ ಕಾಲ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಾವಿನಕಾಯಿ ಹರಿದು ಹಣ್ಣು ಮಾಡಿ ಹುಬ್ಬಳ್ಳಿ, ಶಿರಸಿ, ಬೆಂಗಳೂರು, ಮುಂಬೈ ಮುಂತಾದ ಭಾಗಗಳಿಗೆ ಕೊಂಡೊಯ್ದು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುತ್ತದೆ. ಕೊಂಡೊಯ್ದ ಮಾವನ್ನು ಬಾಯಿಗೆ ಬಂದಂತೆ ಕೇಳುತ್ತಾರೆ. ಇದರಿಂದ ಒಯ್ದ ಹಣ್ಣು ಕೆಟ್ಟು ಹೋಗುವ ಭಯದಿಂದ ದಲ್ಲಾಳಿಗಳು ಕೇಳಿದ ದರಕ್ಕೆ ಕೊಟ್ಟು ಮರಳಬೇಕಾದ ಸ್ಥಿತಿ ನಮ್ಮದಾಗಿದೆ ಎಂಬುವುದು ಇಲ್ಲಿಯ ಮಾವು ಬೆಳೆಗಾರ ರೈತರ ಅಳಲು.
ತೋಟಗಳನ್ನು ಹಿಡಿದುಕೊಂಡು ವ್ಯಾಪಾರ ಮಾಡುವ ದಲ್ಲಾಳಿಗಳ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಮಾವು ಬೆಳೆಗಾರರಿಗೆ ಲಕ್ಷಾಂತರ ರುಪಾಯಿ ನೀಡಿ ಮಾವಿನ ತೋಪುಗಳನ್ನು ಗುತ್ತಿಗೆ ಪಡೆದಿದ್ದಾರೆ. ಅದರಂತೆ ತಾವು ಹೂಡಿದ ಹಣಕ್ಕೆ ಲಾಭದ ನಿರೀಕ್ಷೆಯಿಂದಿರುವವರಿಗೆ ಬೆಲೆ ಕುಸಿತದಿಂದ ಮಾವು ವ್ಯಾಪಾರಸ್ಥ ದಲ್ಲಾಳಿಗಳು ಆತಂಕಕ್ಕೊಳಗಾಗಿದ್ದಾರೆ.ಕೋಲಾರ, ಮಹಾರಾಷ್ಟ್ರದ ರತ್ನಗಿರಿ ಮುಂತಾದ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವು ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದೇ ಮಾವಿನ ಹಣ್ಣಿನ ದರ ಕುಸಿತಕ್ಕೆ ಕಾರಣವಾಗಿದೆ. ಜತೆಗೆ ನಿರಂತರ ಮಳೆಯಿಂದ ಸಾಕಷ್ಟು ಪ್ರಮಾಣದ ಮಾವಿನ ಹಾನಿಗೊಳಗಾಗುತ್ತಿದೆ.
ಎಲ್ಲ ಭಾಗದಿಂದ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಬರುತ್ತಿರುವುದರಿಂದ ನಮ್ಮ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ನಮ್ಮ ಹಣ್ಣನ್ನು ಸಿಕ್ಕ ದರಕ್ಕೆ ನೀಡಿ ಬರುವಂತಾಗಿದೆ. ಇದರಿಂದ ಕೆಲವೊಮ್ಮೆ ವಾಹನದ ಬಾಡಿಗೆ ಕೂಡ ಮೈಮೇಲೆ ಬರುತ್ತದೆ. ಮಳೆಯ ಕಾಟದಿಂದ ಕೂಡ ಮಾವು ಹಾನಿಯಾಗುತ್ತಿದೆ ಎನ್ನುತ್ತಾರೆ ಮಾವು ಬೆಳೆಗಾರ ಆಬಿದಲಿ ಮಹ್ಮದಗೌಸ ಪಾಟೀಲ.