ಕನ್ನಡಪ್ರಭ ವಾರ್ತೆ ಕೋಲಾರ ಉತ್ತಮ ಮಾವಿನ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಗರ ಬಡಿದಂತಾಗಿದೆ. ಕಳೆದ ಒಂದು ವಾರದಿಂದ ಮಾವಿನ ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿದೆ. ಇದರಿಂದ ಮಾವಿಗೆ ಜಿಗಿ ಹುಳ ಸೇರಿದಂತೆ ವಿವಿಧ ಕೀಟ ಬಾಧೆಯ ಭೀತಿ ಉಂಟಾಗಿದೆ. ಕಳೆದ ಐದಾರು ವರ್ಷದಿಂದ ಮಾವಿನ ಫಸಲಿಗೆ ಪ್ರಕೃತಿ ಒಂದಲ್ಲ ಒಂದು ರೀತಿಯಲ್ಲಿ ಕಾಡತೊಡಗಿದೆ. ಎರಡು ಮೂರು ವರ್ಷದಿಂದ ಪ್ರಾರಂಭದಲ್ಲಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಂಡು ಉತ್ತಮ ಫಸಲಿನ ನಿರೀಕ್ಷೆ ಉಂಟು ಮಾಡಿ ಕೊನೆ ಘಳಿಗೆಯಲ್ಲಿ ಹೂವು ಉದುರುವುದು, ಕಚ್ಚಿದ ಕಾಯಿ ನೆಲಕಚ್ಚುವುದು ಸೇರಿದಂತೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಕೀಟಬಾಧೆ ಜೊತೆಗೆ ಮಳೆ ಗುಡುಗು ಆರ್ಭಟಗಳು, ಬೆಲೆ ಕುಸಿತ ಮುಂತಾದ ಕಾರಣಗಳಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆಮಾವಿಗೆ ಔಷಧೋಪಚಾರ
ಈ ವರ್ಷ ಒಂದು ತಿಂಗಳು ತಡವಾಗಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಂಡಿತ್ತು. ಮಾವಿನ ಹೂವು ಮರಗಳಲ್ಲಿ ಕಾಣಿಸಿಕೊಂಡ ರೀತಿ ರೈತನ ಮುಖದಲ್ಲಿ ಹರ್ಷ ಮೂಡುವಂತೆ ಆಯಿತು. ಉತ್ತಮ ಫಸಲು ಕೈಗೆ ಸಿಗುವ ನಿರೀಕ್ಷೆ ಇದೆ ಎಂದು ರೈತ ಭಾವಿಸಿದ ಸಾಲ ಸೋಲ ಮಾಡಿ ರೈತ ಎರಡು ಬಾರಿ ಔಷಧಿಗಳನ್ನು ಮರಗಳಿಗೆ ಸಿಂಪಡಿಸಿ ಇರುವ ಹೂವು ಪಿಂದೆ ಆಗಬೇಕೆಂದು ಜೋಪಾನವಾಗಿ ಕಾಪಾಡಿಕೊಂಡ. ಕಳೆದೊಂದು ವಾರದಿಂದ ಶೇ.೭೦ ರಷ್ಟು ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿದೆ. ಚಿಗುರನ್ನು ತಿನ್ನಲು ಜಿಗಿಹುಳ ಕಾಣಿಸಿಕೊಳ್ಳುತ್ತಿವೆ. ಚಿಗುರು ತಿಂದ ನಂತರ ಮಾವಿನ ಪಿಂದೆಯ ಮೇಲಿನ ಹಸಿರನ್ನೂ ಸಹ ತಿನ್ನುವುದರಿಂದ ಪಿಂದೆ ಹಳದಿ ಬಣ್ಣ ಬಂದು ಉದುರಲು ಪ್ರಾರಂಭಿಸುತ್ತದೆ.ಕಾಯಿ ಆಗುವ ವೇಳೆ ಚಿಗುರುಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡು ನಂತರ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಈ ವರ್ಷ ಒಂದು ತಿಂಗಳು ತಡವಾಗಿ ಹೂವು ಕಾಣಿಸಿಕೊಂಡು ಫೆಬ್ರವರಿ ತಿಂಗಳಲ್ಲಿಯೂ ಹೂವು ಕಾಣಿಸಿಕೊಂಡಿತ್ತು. ಇನ್ನೇನು ಹೂವು ಉದುರಿ ಮಾವಿನ ಪಿಂದೆಯಾಗುವ ಸಂದರ್ಭದಲ್ಲಿ ಕೆಲವು ಮರಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತಿದೆ. ಪಿಂದೆಗೆ ಸಿಗಬೇಕಾಗಿದ್ದ ಎನರ್ಜಿ ಮಾವಿನ ಚಿಗುರಿಗೆ ಹೋಗುತ್ತಿರುವುದರಿಂದ ಹೂವು ಪಿಂದೆಯಾಗುವುದಕ್ಕಿಂತ ಉದುರುವುದೇ ಹೆಚ್ಚಾಗಿದೆ.
ಮಾವಿನ ಫಸಲಿಗೆ ಹೊಡೆತತೋತಾಪುರಿ, ನೀಲಂ ಹೊರತುಪಡಿಸಿ ಉಳಿದ ಎಲ್ಲಾ ಜಾತಿಯ ಮಾವಿನ ಮರಗಳ ಫಸಲಿನ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಮಲ್ಲಿಕಾ ಮತ್ತು ಬಾದಾಮಿ ಮುಂತಾದ ತಳಿಗಳ ಮರಗಳಲ್ಲಿ ಜಿಗಿಹುಳ ಹೆಚ್ಚಾಗಿ ಕಾಡತೊಡಗುತ್ತದೆ. ಪ್ರಾರಂಭದಲ್ಲಿಯೇ ಔಷಧಿ ಸಿಂಪಡಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದಾಗಿದೆ. ಔಷಧಿ ಹೊರೆ ರೈತನಿಗೆ ಆಗಬಹುದು. ಸರ್ಕಾರ ರಿಯಾಯಿತಿ ದರದಲ್ಲಿ ಔಷಧಿಗಳನ್ನು ರೈತರಿಗೆ ಒದಗಿಸುವ ಕೆಲಸ ಮಾಡಬೇಕೆಂದು ರೈತರ ಒತ್ತಾಯ. ಕೋಟ್ ............. ಉಷ್ಣಾಂಶ ಹೆಚ್ಚಾಗಿರುವುದರಿಂದ ಮಾವಿನ ಪಿಂದೆಗೆ ಸಿಗಬೇಕಾಗಿದ್ದ ಶಕ್ತಿ ಚಿಗುರಿಗೆ ಸಿಗುತ್ತಿದೆ. ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳ ಹಾಗೂ ತಜ್ಞರ ಮಾಹಿತಿ ಪಡೆದು ಮತ್ತೊಂದು ಬಾರಿ ಔಷಧಿ ಸಿಂಪಡಣೆ ಮಾಡಬೇಕು. ಶೇ.೪೦ ರಿಂದ ೫೦ ರಷ್ಟು ಫಸಲು ಸಿಗುವ ನಿರೀಕ್ಷೆ ಇದೆ. - ಡಾ.ರಾಜಾರೆಡ್ಡಿ, ಪ್ರಗತಿಪರ ರೈತ.
ಕೋಟ್....................ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡಿರುವುದರಿಂದ ಜಿಗಿಹುಳ ಕಾಟ ಇದ್ದೇ ಇರುತ್ತದೆ. ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲೇಬೇಕು. ಚಿಗುರಿನ ಜೊತೆಗೆ ಹೂವು ಇದೆ. ನೀರು ಇರುವವರು ಮರಗಳಿಗೆ ನೀರು ನೀಡುವುದರ ಮೂಲಕ ಶಕ್ತಿ ಕೊಡಬೇಕಾಗುತ್ತದೆ. ಪ್ರಕೃತಿಗೆ ಹೊಂದಿಕೊಳ್ಳಲೇಬೇಕಾಗುತ್ತದೆ.- ಬೈರಾರೆಡ್ಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ, ಶ್ರೀನಿವಾಸಪುರ.