ಮಳೆ ಗಾಳಿಗೆ ಧರೆಗುರುಳಿದ ಮಾವು

KannadaprabhaNewsNetwork | Published : Apr 10, 2025 1:15 AM

ಸಾರಾಂಶ

ಮಾವಿನ ಫಸಲು ಕೈ ಸೇರುವ ಮುಂಚೆ ಮಳೆರಾಯನ ಆರ್ಭಟದಿಂದ ಸಾವಿರಾರು ನಷ್ಟವುಂಟಾಗಿದೆ

ಕುಷ್ಟಗಿ: ತಾಲೂಕಿನ ದೋಟಿಹಾಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ, ಗಾಳಿಗೆ ಮಾವಿನ ಫಸಲು ಹಾನಿಯಾಗಿದೆ, ಬಿಸಿಲಿನ ಧಗೆಯಿಂದ ಹೈರಾಣ ಆಗಿರುವ ಜನತೆಗೆ ಮಳೆ ತಂಪು ನೀಡಿದರೆ ಮಾವಿನ ಫಸಲು ಬೆಳೆದ ರೈತರಿಗೆ ನಷ್ಟವನ್ನುಂಟು ಮಾಡಿದೆ.

ರಾತ್ರಿ 8ಗಂಟೆಯ ಸುಮಾರಿಗೆ ಸುರಿದ ಮಳೆ ಮತ್ತು ಗಾಳಿಯಿಂದ ಹಣ್ಣು ಕೈ ಸೇರುವ ಆಸೆಯಲ್ಲಿದ್ದ ಮಾವು ಬೆಳೆಗಾರರ ಆಸೆಗೆ ತಣ್ಣೀರು ಎರಚಿದೆ ಎನ್ನಬಹುದು.

ತಾಲೂಕಿನ ದೋಟಿಹಾಳ ಹಾಗೂ ಕೇಸೂರು, ಕ್ಯಾದಿಗುಪ್ಪ ಗ್ರಾಮದಲ್ಲಿರುವ ಮಾವಿನ ತೋಟದಲ್ಲಿನ ನೂರಾರು ಗಿಡಗಳಲ್ಲಿನ ಸಾವಿರಾರು ಮಾವಿನಕಾಯಿಗಳು ಗಾಳಿಯ ರಭಸಕ್ಕೆ ಕೆಳಗೆ ಬಿದ್ದಿವೆ. ಕೇಸೂರು ಗ್ರಾಮದ ಮಹಾಂತೇಶ ಕರಡಿಗೆ ಸೇರಿದ ಮಾವಿನ ತೋಟ, ದೋಟಿಹಾಳದ ಮೌನೇಶ ಭಜಂತ್ರಿ ಗುತ್ತಿಗೆ ಪಡೆದುಕೊಂಡ ಮಾವಿನ ತೋಟ, ಕ್ಯಾದಿಗುಪ್ಪದ ಹನಮಗೌಡ ಮಾವಿನ ತೋಟದಲ್ಲಿರುವ ಗಿಡಗಳಲ್ಲಿನ ಮಾವಿನ ಕಾಯಿಗಳು ಉದುರಿ ಬಿದ್ದಿದ್ದು, ಮಾವಿನ ಫಸಲು ಕೈ ಸೇರುವ ಮುಂಚೆ ಮಳೆರಾಯನ ಆರ್ಭಟದಿಂದ ಸಾವಿರಾರು ನಷ್ಟವುಂಟಾಗಿದೆ ಎಂದು ರೈತರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ:

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ವಿದ್ಯುತ್ ನಿಂದ ಅನಾಹುತ ಸೃಷ್ಟಿಯಾಗಬಾರದು ಎಂಬ ಮುಂಜಾಗೃತಾ ಕ್ರಮವಾಗಿ ಜೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ವ್ಯತ್ಯಯಕ್ಕೆ ಮುಂದಾಗಿದ್ದರು ಸುಮಾರು ಒಂದುವರೆ ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಿದ್ದರು.

ಒತ್ತಾಯ:

ದೋಟಿಹಾಳ, ಕೇಸೂರು, ಕ್ಯಾದಿಗುಪ್ಪ, ಕಡೇಕೊಪ್ಪ ಗ್ರಾಮಗಳಲ್ಲಿ ಮಾವಿನ ಕಾಯಿಗಳು ಮಂಗಳವಾರ ರಾತ್ರಿ ಸುರಿದ ಗಾಳಿ ಮಳೆಗೆ ಬಹುತೇಕ ಉದುರಿ ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಅಧಿಕಾರಿಗಳು ಸೂಕ್ತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ ರಾತ್ರಿ ಸುರಿದ ಮಳೆಗಾಳಿಗೆ ಕೆಲವೆಡೆ ಮಾವಿನ ಫಸಲು ಹಾಳಾಗಿರುವದು ಗಮನಕ್ಕಿದ್ದು , ಕೂಡಲೆ ನಮ್ಮ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣನವರು ತಿಳಿಸಿದ್ದಾರೆ.

Share this article