)
ಬಂಟ್ವಾಳ: ಮಕ್ಕಳ ಶಾಲಾ ಪ್ರವೇಶಕ್ಕೂ ಡಿಜಿಟಲ್ ನಿಗಾ, ಹಾಜರಾತಿ ದಾಖಲಾದ ತಕ್ಷಣ ಪೋಷಕರ ಮೊಬೈಲ್‌ಗೆ ಸಂದೇಶ, ಶಾಲಾ ಬಸ್ ಎಲ್ಲಿದೆ ಎಂಬುದನ್ನು ಮನೆಯಲ್ಲೇ ಕುಳಿತು ಲೈವ್ ವೀಕ್ಷಿಸುವ ವ್ಯವಸ್ಥೆ, ತರಗತಿಗಳಲ್ಲಿ ಸ್ಮಾರ್ಟ್ ಬೋರ್ಡ್ ಮೂಲಕ ಆಧುನಿಕ ಕಲಿಕೆ. ಹೀಗೆ ತಂತ್ರಜ್ಞಾನ ಮತ್ತು ಮಕ್ಕಳ ಸುರಕ್ಷತೆಯನ್ನು ಸಮನ್ವಯಗೊಳಿಸಿರುವ ಮಾಣಿ–ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿನೂತನ ಕಾರ್ಯವೈಖರಿಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರವೇಶದ್ವಾರದಲ್ಲಿರುವ ಆರ್‌ಎಫ್‌ಐಡಿ (RFID) ಟರ್ನ್‌ಸ್ಟೈಲ್ ಗೇಟ್, ಡಿಜಿಟಲ್ ಗುರುತಿನ ಚೀಟಿ ಆಧಾರಿತ ಹಾಜರಾತಿ ವ್ಯವಸ್ಥೆ, ಶಾಲೆಗೆ ಆಗಮಿಸಿದ ಹಾಗೂ ನಿರ್ಗಮಿಸಿದ ಮಾಹಿತಿಯನ್ನು ತಕ್ಷಣ ಪೋಷಕರಿಗೆ ತಲುಪಿಸುವ ತಂತ್ರಜ್ಞಾನ, ಸ್ಮಾರ್ಟ್ ಬೋರ್ಡ್‌ಗಳ ಮೂಲಕ ನಡೆಯುವ ಬೋಧನಾ ವಿಧಾನವನ್ನು ಸ್ವಾಮೀಜಿ ವೀಕ್ಷಿಸಿದರು.
ಶಾಲಾ ಬಸ್‌ಗಳಲ್ಲಿ ಆರ್‌ಎಫ್‌ಐಡಿ (RFID) ಸ್ಕ್ಯಾನಿಂಗ್, ಸಿಸಿ ಕ್ಯಾಮೆರಾ, ಜಿಪಿಎಸ್ ಲೈವ್ ಟ್ರ್ಯಾಕಿಂಗ್ ಹಾಗೂ ಸ್ಪೀಡ್ ಗವರ್ನರ್ ವ್ಯವಸ್ಥೆ ಸೇರಿದಂತೆ ಮಕ್ಕಳ ಪ್ರಯಾಣದ ಸುರಕ್ಷತೆಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪೋಷಕರು ಮೊಬೈಲ್ ಆ್ಯಪ್ ಮೂಲಕ ಬಸ್‌ನ ನೈಜ ಸ್ಥಳವನ್ನು ತಿಳಿದುಕೊಳ್ಳುವ ವ್ಯವಸ್ಥೆ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಡಿಜಿಟಲ್ ತಂತ್ರಜ್ಞಾನವನ್ನು ಕೇವಲ ಆಕರ್ಷಣೆಗೆ ಬಳಸದೆ, ಮಕ್ಕಳ ಸುರಕ್ಷತೆ, ಶೈಕ್ಷಣಿಕ ಗುಣಮಟ್ಟ ಹಾಗೂ ಪೋಷಕರ ನೆಮ್ಮದಿಗೆ ಪೂರಕವಾಗಿ ಅಳವಡಿಸಿರುವುದು ಸಂಸ್ಥೆಯ ದೂರದೃಷ್ಟಿಯನ್ನು ತೋರಿಸುತ್ತದೆ. ಇಂತಹ ಪ್ರಯತ್ನಗಳು ಇತರ ಶಿಕ್ಷಣ ಸಂಸ್ಥೆಗಳಿಗೂ ಪ್ರೇರಣೆಯಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಬಾಲವಿಕಾಸ ಟ್ರಸ್ಟ್‌ನ ಅಧ್ಯಕ್ಷ ಪ್ರಹ್ಲಾದ್ ಜೆ. ಶೆಟ್ಟಿ ಹಾಗೂ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಉಪಸ್ಥಿತರಿದ್ದರು.