ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ
ಮಣಿಪಾಲ: ಬೆಳೆಯುತ್ತಿರುವ ಔದ್ಯೋಗಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸುವ ಕೌಶಲ ಇದ್ದರೆ ಸಾಲದು, ಅದು ನೀಡುವ ಫಲಿತಾಂಶಗಳನ್ನು ಪರಿಶೀಲಿಸುವ ಜಾಣ್ಮೆಯು ಇರಬೇಕಾಗುತ್ತದೆ. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿ, ಅದರಿಂದ ಸರಿಯಾದ ಉಪಯೋಗ ಪಡೆಯುವುದು ಇಂದಿನ ಅತ್ಯಗತ್ಯ ಎಂದು ಹಿತಾಚಿ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ಹಾಗೂ ಚೀಫ್ ಟ್ರಾನ್ಸ್‌ಫಾರ್ಮೇಶನ್ ಅಧಿಕಾರಿ (ಸಿಟಿಆರ್‌ಒ) ಕೋಜಿ ತ್ಸುಬೋಟಾ ಹೇಳಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದ 2ನೇ ದಿನ ಶುಕ್ರವಾರ ಅವರು ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಿದರು. ನಾವು ಕೇಳಿದ ಪ್ರಶ್ನೆಗಳಿಗೆಲ್ಲ ಎಐ ಉತ್ತರ ನೀಡುತ್ತದೆ, ಆದರೆ ಸರಿಯಾದ ಪ್ರಶ್ನೆ ಕೇಳುವುದು ನಮ್ಮ ಬುದ್ದಿವಂತಿಕೆ. ತಂತ್ರಜ್ಞಾನ ಎನ್ನುವುದು ಒಂದು ಸಾಧನ ಅಷ್ಟೇ, ಅದನ್ನು ಬಳಸುವಾಗ ಮಾನವೀಯತೆ ಮತ್ತು ಸರಿ-ತಪ್ಪಿನ ಅರಿವು ಮುಖ್ಯವಾಗಬೇಕು ಎಂದವರು ನಿರ್ಗಮನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು, ‘ಪದವೀಧರರ ಸಾಧನೆಯಷ್ಟೇ ಅವರ ಸಾಮಾಜಿಕ ಹೊಣೆಗಾರಿಕೆಯೂ ಮುಖ್ಯ. ಪದವೀಧರರು ತಮ್ಮ ಕೌಶಲ ಮತ್ತು ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಬೇಕು’ ಎಂದು ಕರೆ ನೀಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಮಾಹೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.
ಶಾಲ್ ರಾಯ್ (ಬಿಎಸ್ಸಿ ನರ್ಸಿಂಗ್, ಎಂಕಾನ್ ಮಣಿಪಾಲ್) ಮತ್ತು ಮೊಹಮ್ಮದ್ ಸೈಫ್ ಝಿದಾನ್ (ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಪಿಎಸ್‌ಪಿಎಚ್ ಮಣಿಪಾಲ್) ಇವರಿಗೆ ತಮ್ಮ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು. 44 ಪಿಎಚ್‌ಡಿ ಸೇರಿದಂತೆ ಒಟ್ಟು 1,416 ವಿದ್ಯಾರ್ಥಿಗಳಿಗೆ ಮಣಿಪಾಲದಲ್ಲಿ ಪದವಿ ಪ್ರದಾನ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.