ರಾಜ್ಯದ ಪ್ರಥಮ ಎಕ್ಸೈಮರ್ ಲೇಸರ್ ಕರೋನರಿ ಆಂಜಿಯೋಪ್ಲಾಸ್ಟಿ । ಡಿಸಿಜಿಐ ಮಾನ್ಯತೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಇದರೊಂದಿಗೆ ಕಸ್ತೂರ್ಬಾ ಆಸ್ಪತ್ರೆಯು ಹೃದಯಾಘಾತಗಳಿಗೆ ಚಿಕಿತ್ಸೆಯಲ್ಲಿ ಎಕ್ಸೈಮರ್ ಲೇಸರ್ ಕರೋನರಿ ಆಂಜಿಯೋಪ್ಲಾಸ್ಟಿ (ಇಎಲ್‌ಸಿಎ) ಎಂಬ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಕರ್ನಾಟಕದ ಮೊದಲ ಕೇಂದ್ರವಾಗಿ ಹೊರಹೊಮ್ಮಿದೆ. ಈ ಚಿಕಿತ್ಸೆಗೆ ಇದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಯ ಅನುಮೋದನೆ ಕೂಡ ಲಭಿಸಿದೆ.ಲೇಸರ್ ಆಂಜಿಯೋಪ್ಲ್ಯಾಸ್ಟಿಯು ಮುಚ್ಚಿಹೋಗಿರುವ ಹೃದಯ ಅಪಧಮನಿಗಳನ್ನು ತೆರೆಯಲು ಒಂದು ನವೀನ ಚಿಕಿತ್ಸಾ ವಿಧಾನವಾಗಿದೆ, ಈ ಲೇಸರ್ ಹೆಚ್ಚಿನ ನಿಖರತೆಯೊಂದಿಗೆ ಕಠಿಣ ಅಥವಾ ಸಂಕೀರ್ಣವಾದ ಅಡೆತಡೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
ಸಾಂಪ್ರದಾಯಿಕ ಬಲೂನ್ ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟಿಂಗ್‌ಗಿಂತ ಭಿನ್ನವಾಗಿ, ಎಕ್ಸೈಮರ್ ಲೇಸರ್‌ನಲ್ಲಿ ನೇರಳಾತೀತ ಬೆಳಕನ್ನು ಬಳಸಿ, ಕನಿಷ್ಠ ಗಾಯದೊಂದಿಗೆ ರಕ್ತನಾಳದ ತಡೆಯನ್ನು ನಿಖರವಾಗಿ ತೆಗೆದುಹಾಕುವುದು ಸಾಧ್ಯವಾಗಿದೆ.ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಮತ್ತು ಲೇಸರ್ ನೆರವಿನ ಆಂಜಿಯೋಪ್ಲ್ಯಾಸ್ಟಿಗೆ ಜಾಗತಿಕ ಪ್ರಾಕ್ಟರ್ ಆಗಿರುವ ಘಟಕ ಮುಖ್ಯಸ್ಥ ಡಾ. ಟಾಮ್ ದೇವಾಸಿಯಾ ಮಾರ್ಗದರ್ಶನದಲ್ಲಿ ಇಂತಹ 75 ಲೇಸರ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಹೃದ್ರೋಗ ತಂಡವನ್ನು ಅಭಿನಂದಿಸಿದ, ಮಣಿಪಾಲ ಕ್ಲಸ್ಟರ್ ಸಿಒಒ ಡಾ. ಸುಧಾಕರ್ ಕಂಟಿಪುಡಿ, ‘ಇದೀಗ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಈಗ ಲೇಸರ್ ಅಸಿಸ್ಟೆಡ್ ಕರೋನರಿ ಆಂಜಿಯೋಪ್ಲಾಸ್ಟಿಗಾಗಿ ಜಾಗತಿಕ ಶ್ರೇಷ್ಠತೆಯ ಕೇಂದ್ರವೆಂದು ಗುರುತಿಸಲ್ಪಟ್ಟಿದೆ, ಅಲ್ಲದೆ, ಆಸ್ಪತ್ರೆಯು ಅತ್ಯಾಧುನಿಕ ಇಎಲ್‌ಸಿಎ ಯಂತ್ರಕ್ಕೆ ಅಪ್‌ಗ್ರೇಡ್ ಆಗಿದ್ದು, ಇದು ರೋಗಿಗಳ ಸುರಕ್ಷತೆ, ಚಿಕಿತ್ಸೆಯ ದಕ್ಷತೆ ಮತ್ತು ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.