ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಂಕೀರ್ಣವಾದ ಶ್ವಾಸನಾಳದ (ಎದೆಯೊಳಗಿನ) ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಇದು ಕರ್ನಾಟಕದಲ್ಲಿ ಸುಧಾರಿತ ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ಇದೀಗ ಕಸ್ತೂರ್ಬಾ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗವು ಶ್ವಾಸಕೋಶ, ಥೈಮಸ್, ಅನ್ನನಾಳ, ಹೊಟ್ಟೆ, ಗುದನಾಳ, ಮೇದೋಜೀರಕ ಗ್ರಂಥಿ, ಯಕೃತ್ತು, ಗರ್ಭಕೋಶ ಮತ್ತು ಮೂತ್ರಪಿಂಡಗಳ ಕ್ಯಾನ್ಸರಿಗೆ ಈ ರೋಬೋಟಿಕ್ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ಈ ಸಾಧನೆಗಾಗಿ ವೈದ್ಯರ ತಂಡವನ್ನು, ಮಾಹೆ ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಸುಧಾಕರ್ ಕಂಟಿಪುಡಿ ಅವರು ಅಭಿನಂದಿಸಿದ್ದು, ಈ ಸಾಧನೆಯು ಕಸ್ತೂರ್ಬಾ ಆಸ್ಪತ್ರೆಗೆ ಹೆಮ್ಮೆಯ ಕ್ಷಣವಾಗಿದೆ, ಭವಿಷ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಈ ರೀತಿಯ ಸಂಕೀರ್ಣ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಲು ನಾವು ಸುಧಾರಿತ ತಂತ್ರಜ್ಞಾನ ಮತ್ತು ಪರಿಣತಿಯನ್ನು ಹೊಂದುತ್ತೇವೆ ಎಂದು ಹೇಳಿದ್ದಾರೆ.ಈ ಹಿಂದಿನ ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಯಲ್ಲಿ, ರೋಗಿಗೆ ಎದೆಯ ಮೇಲೆ ದೊಡ್ಡ ಛೇದನ ಅಗತ್ಯವಿತ್ತು, ಇದರಿಂದ ರೋಗಿಗೆ ಹೆಚ್ಚು ನೋವು ಇರುತ್ತದೆ, ಚೇತರಿಕೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಮತ್ತು ಎದೆಯ ಮೇಲೆ ದೊಡ್ಡ ಗಾಯದ ಗುರುತು ಉಳಿದುಬಿಡುತ್ತದೆ. ಆದರೆ ಈ ರೊಬೊಟಿಕ್ ಶಸ್ತ್ರಚಿಕಿತ್ಸೆಯಿಂದ ಈ ಸಮಸ್ಯೆಗಳಿಲ್ಲದೆ, ರೋಗಿಯು ನಾಲ್ಕನೇ ದಿನಕ್ಕೆ ಬಿಡುಗಡೆಯಾಗಿದ್ದಾರೆ. ಆದ್ದರಿಂದ ಈ ರೊಬೊಟಿಕ್ ಶಸ್ತ್ರಚಿಕಿತ್ಸೆಗಳು ಒಂದು ವರದಾನವಾಗಿದೆ.