ಭಾರತದಲ್ಲಿರುವ ಆರೇಳು ಪ್ರಯೋಗಾಲಯಗಳಲ್ಲಿ ಈಗ ಮಣಿಪಾಲಕ್ಕೂ ಸ್ಥಾನ
ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸಂಪೂರ್ಣ ಪ್ರಮಾಣೀಕೃತ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಟ್ಯಾಂಡೆಮ್ ಮಾಸ್ ಸ್ಪೆಕ್ಟ್ರೋಮೆಟ್ರಿ (ಟ್ರಿಪಲ್ ಕ್ವಾಡ್ರುಪೋಲ್) ಸೌಲಭ್ಯವನ್ನು ಹೊಂದಿರುವ ಅತ್ಯಾಧುನಿಕ ಕೋರ್ ಮೆಟಾಬಾಲಿಕ್ ಲ್ಯಾಬ್ ಆರಂಭಿಸಲಾಗಿದೆ. ಮಾಹೆ ಪ್ರಾಯೋಜಿತ ಈ ಪ್ರಯೋಗಾಲಯವನ್ನು ಮಾಹೆಯ ಸಹಕುಲಪತಿ ಡಾ. ಶರತ್ ಕೆ. ರಾವ್ ಮಂಗಳವಾರ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಮಾಹೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್, ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್, ಹಿರಿಯ ಸಂಶೋಧನಾ ನಿರ್ದೇಶಕ ಡಾ. ರವಿರಾಜ ಎನ್.ಎಸ್., ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
* ಪ್ರಯೋಗಾಲಯದ ಮಹತ್ವ:ಈ ಕೋರ್ ಮೆಟಬಾಲಿಕ್ ಪ್ರಯೋಗಾಲಯವು ನವಜಾತ ಶಿಶುಗಳಲ್ಲಿನ ಚಯಾಪಚಯ ಅಸ್ವಸ್ಥತೆ ಮತ್ತು ಅಪೌಷ್ಟಿಕತೆಯ ಅಸ್ವಸ್ಥತೆಗಳು, ವಯಸ್ಕರಲ್ಲಿ ಚಯಾಪಚಯ ಕಾಯಿಲೆಗಳು ಸೇರಿದಂತೆ ತಡೆಗಟ್ಟಬಹುದಾದ ಬಾಲ್ಯದ ಕಾಯಿಲೆಗಳ ಪತ್ತೆ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ. ಈ ಕಾಯಿಲೆಗಳ ಕ್ಲಿನಿಕಲ್ ಸಂಶೋಧನೆ ನಡೆಸುವುದು ಇದರ ಪ್ರಮುಖ ಧ್ಯೇಯವಾಗಿದೆ.ಈ ಪ್ರಯೋಗಾಲಯವು 54 ನಿಯತಾಂಕಗಳನ್ನು ಒಳಗೊಂಡ ವಿಸ್ತೃತ ನವಜಾತ ಶಿಶುಗಳ ಸ್ಕ್ರೀನಿಂಗ್ (ಎನ್‌ಬಿಎಸ್) ನಡೆಸುತ್ತದೆ. ಇದರಲ್ಲಿ ಒಟ್ಟು ಮೆಟಾನೆಫ್ರಿನ್‌ಗಳು ಮತ್ತು ನಾರ್ಮೆಟನೆಫ್ರಿನ್‌ಗಳಿಗೆ ಸುಧಾರಿತ ಪರೀಕ್ಷೆಗಳೂ ಒಳಗೊಂಡಿದೆ.* ಸೀಮಿತ ಸಂಖ್ಯೆಅಮೆರಿಕದ ಥರ್ಮೋ ಫಿಶರ್ ಸೈಂಟಿಫಿಕ್‌ನ ವೈದ್ಯಕೀಯ ಸಾಧನ ಸರಣಿಯ ದಕ್ಷಿಣ ಏಷ್ಯಾದ ಮೊದಲ ಪ್ರಯೋಗಾಲಯವಾಗಿ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ. ಭಾರತದಲ್ಲಿ ಇಂತಹ ಉನ್ನತಮಟ್ಟದ ರೋಗನಿರ್ಣಯ ಮಾಡುವ ಕೇವಲ 6 - 7 ಪ್ರಯೋಗಾಲಯಗಳ ಮಾಹೆಯೂ ಸ್ಥಾನ ಪಡೆದಿದೆ. ಗುಣಮಟ್ಟ, ಪಾರದರ್ಶಕತೆ ಮತ್ತು ಸಕಾಲಿಕ ವರದಿ ನೀಡುವ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೈಗೆಟುಕುವ ದರದಲ್ಲಿ ಸೇವೆಗಳನ್ನು ಒದಗಿಸಲಾಗುತ್ತದೆ.
ಈ ಪ್ರಯೋಗಾಲಯದಲ್ಲಿ ಕೆಎಂಸಿಯ ಮಕ್ಕಳ ವಿಭಾಗದ ಮುಖ್ಯಸ್ಥ ಹಾಗೂ ಕೇಂದ್ರದ ಸಂಯೋಜಕ ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್ ನೇತೃತ್ವ ವಹಿಸಲಿದ್ದು, ಅವರಿಗೆ ಜೀವರಸಾಯನಶಾಸ್ತ್ರದ ಮುಖ್ಯಸ್ಥ ಡಾ. ರವೀಂದ್ರ ಮರಡಿ, ಪ್ರಾಧ್ಯಾಪಕಿ ಮತ್ತು ಸಹಸಂಯೋಜಕ ಡಾ. ವರಶ್ರೀ ಬಿ.ಎಸ್. ಮತ್ತು ಪ್ರಾಧ್ಯಾಪಕ ಡಾ. ಕೃಷ್ಣಾನಂದ ಪ್ರಭು ಆರ್.ವಿ. ಬೆಂಬಲ ನೀಡಲಿದ್ದಾರೆ. ಇವರೆಲ್ಲರೂ ಈ ಅತ್ಯಾಧುನಿಕ ಸೌಲಭ್ಯದ ಸ್ಥಾಪಕ ಸ್ತಂಭಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.