ಟ್ಯಾಟೂ 313 ಗ್ಯಾಂಗಿನ ಇಬ್ಬರು ಆರೋಪಿಗಳ ಸೆರೆ

KannadaprabhaNewsNetwork |  
Published : Jun 11, 2026, 01:30 AM IST
ಫೋಟೋ ಃ 313 | Kannada Prabha

ಸಾರಾಂಶ

ಕರ್ನಾಟಕ, ಆಂಧ್ರ, ತಮಿಳುನಾಡಿನ ಪೊಲೀಸರಿಗೆ ಬೇಕಾಗಿರುವ ‘ಟ್ಯಾಟೂ 313’ ಎಂಬ ಗ್ಯಾಂಗಿನ ಇಬ್ಬರು ಮನೆಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಅವರಿಂದ 7.90 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪಾಲ: ಕರ್ನಾಟಕ, ಆಂಧ್ರ, ತಮಿಳುನಾಡಿನ ಪೊಲೀಸರಿಗೆ ಬೇಕಾಗಿರುವ ‘ಟ್ಯಾಟೂ 313’ ಎಂಬ ಗ್ಯಾಂಗಿನ ಇಬ್ಬರು ಮನೆಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಅವರಿಂದ 7.90 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಕೆಲವು ದಿನಗಳ ಹಿಂದೆ ಇಲ್ಲಿನ ಮಂಚಿಕೋಡಿ ಎಂಬಲ್ಲಿನ ಅಮಿತ್ ಡ್ಯಾನಿಯಲ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂ. 6ರಂದು ಮಣಿಪಾಲ ಎಸ್ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಇಂದ್ರಾಳಿ ರೈಲ್ವೆ ಗೋದಾಮು ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಓಡಾಡುತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಂಧಿತರನ್ನು ಬೆಂಗಳೂರಿನ ಸಿಂಗಸಂದ್ರ ನಿವಾಸಿ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಬಸವನಹಾಳ ನಿವಾಸಿ ಚಂದ್ರು (26) ಎಂದು ಗುರುತಿಸಲಾಯಿತು.ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಅವರು ‘ಟ್ಯಾಟೂ 313’ ಗ್ಯಾಂಗಿನ ಕಳ್ಳರೆಂದು ಪತ್ತೆಯಾಯಿತು. ಈ ಗ್ಯಾಂಗಿನ ಕಳ್ಳರು ಕೈ ಮೇಲೆ ‘313’ ಎಂಬ ಹಚ್ಚೆ (ಟ್ಯಾಟೂ) ಹಾಕಿಕೊಂಡು ತಮ್ಮನ್ನು ‘ಟ್ಯಾಟೂ 313’ ಗ್ಯಾಂಗಿನವರೆಂದು ಗುರುತಿಸಿಕೊಂಡಿದ್ದರು.ಬಂಧಿತ ಆರೋಪಿಗಳು ರೈಲ್ವೆ ಹಳಿಗಳ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು, ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ, ಬಾಗಿಲು ಒಡೆದು ಕಳ್ಳತನ ನಡೆಸುತ್ತಿದ್ದುದಾಗಿ, ಅದೇ ರೀತಿ ಜೂ, 6ರಂದು ರಾತ್ರಿ ಮತ್ತೊಂದು ಕಳ್ಳತನಕ್ಕೆ ಸಿದ್ಧತೆ ನಡೆಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.ಆರೋಪಿಗಳು ನೀಡಿದ ಮಾಹಿತಿಯಂತೆ ಶಿವಮೊಗ್ಗದ ಲಾಡ್ಜೊಂದರಲ್ಲಿ ಅವರು ಅಡಗಿಸಿಟ್ಟಿದ್ದ ಸುಮಾರು 60 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಈ ಆರೋಪಿಗಳು ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸಮೀಪದಲ್ಲಿಯೂ ಕಳ್ಳತನ ನಡೆಸಿದ್ದು, ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳ ಬಂಧನ ಬಾಕಿ ಇದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೆಗೆ ಬಂದು ರೈತರಿಗೆ ಹೆದರಿ ಕಾಲ್ಕಿತ್ತ ಅಧಿಕಾರಿಗಳು!
ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿ