ಗಂಗಾವತಿ: ಹಿಂದೂಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತದ ಸಂಪರ್ಕ ಪ್ರಮುಖ ಮಂಜುನಾಥ ಸ್ವಾಮಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರದಂತಹ ದುಷ್ಕತ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದು ಹಿಂದೂಗಳ ವೈಫಲ್ಯ ಅಲ್ಲ. ತಟಸ್ಥರಾಗಿರುವುದೇ ಕಾರಣವಾಗಿದೆ ಎಂದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮಾರಣಹೋಮ ನಡೆಯುತ್ತಿವೆ. ಅಲ್ಲದೇ ವಿವಿಧ ದೇಶಗಳಲ್ಲಿಯೂ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಕಾರಣ ಹಿಂದೂಗಳು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿರುವ ನಾವು ನೀವು ಎಲ್ಲರೂ ಮತ್ತೆ ಹಿಂದೂ ಧರ್ಮ ಪುನರ್ ಪ್ರತಿಷ್ಠಾಪನೆ ಸಂಕಲ್ಪ ಮಾಡಬೇಕಾಗಿದೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ ಕೇವಲ 3-4 ದಿನಗಳ ಕಾಲ ಮಾಲೆ ಧರಿಸಿದರೆ ಸಾಲದು, ಇಡಿ ವರ್ಷದುದ್ದಕ್ಕೂ ಹಿಂದುತ್ವವನ್ನು ಕಾಪಾಡುವ ಕೆಲಸವಾಗಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗಾರಾಜ ಅಪ್ಪ ಅವರು, ಸನಾತನ ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಿಲತಾರಾಣಿ ಶ್ರೀರಂಗದೇವರಾಯಲು, ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದಿಂದ ಮಹಾವೀರ ವೃತ್ತ, ಮಹಾತ್ಮ ಗಾಂಧಿ ವೃತ್ತ ಮತ್ತು ಬಸವಣ್ಣ ವೃತ್ತದ ಮೂಲಕ ಶ್ರೀಕೃಷ್ಣದೇವರಾಯ ವೃತ್ತದ ಬಳಿಯ ವರೆಗೂ ಸಂಕೀರ್ತನೆ ಯಾತ್ರೆ ನಡೆಯಿತು.ಒಂದು ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಜೈ ಆಂಜನೇಯ ಎನ್ನುವ ಘೋಷಣೆಗಳು ಮೊಳಗಿದವು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರಿಗೆ ನಗರದ ವಿವಿಧ ದೇವಸ್ಥಾನ ಮತ್ತು ಮಠಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಂಕೀರ್ತನೆ ಯಾತ್ರೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರೂಪಾಕ್ಷಪ್ಪ ಸಿಂಗನಾಳ, ವಿನಯ್ ಪಾಟೀಲ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಪ್ರಮುಖರು ಭಾಗವಹಿಸಿದ್ದರು.