ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಮತ್ತೆ 3 ತಿಂಗಳು ವಿಳಂಬ

KannadaprabhaNewsNetwork |  
Published : Mar 19, 2025, 12:31 AM IST
ಬಾಕ್ಸ್‌ ಪುಶ್ಶಿಂಗ್‌ಗೆ ಸಿದ್ಧತೆ ನಡೆಸಿರುವುದು | Kannada Prabha

ಸಾರಾಂಶ

ಜೆಪ್ಪಿನಮೊಗರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ ಮಾಂಕಾಳಿಪಡ್ಪು ರೈಲ್ವೆ ಕೆಳ ಸೇತುವೆ(ಆರ್‌ಯುಬಿ) ಕಾಮಗಾರಿ ಮತ್ತೆ ವಿಳಂಬವಾಗಿದೆ. ಉದ್ದೇಶಿತ ಈ ಕಾಮಗಾರಿ ಫೆಬ್ರವರಿಗೆ ಮುಕ್ತಾಯಗೊಳ್ಳಬೇಕಿತ್ತು, ಇದೀಗ ಮತ್ತೆ ಮೂರು ತಿಂಗಳು ಮುಂದಕ್ಕೆ ಹೋಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರ ಹಾಗೂ ಹೊರವಲಯ ಜೆಪ್ಪಿನಮೊಗರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ ಮಾಂಕಾಳಿಪಡ್ಪು ರೈಲ್ವೆ ಕೆಳ ಸೇತುವೆ(ಆರ್‌ಯುಬಿ) ಕಾಮಗಾರಿ ಮತ್ತೆ ವಿಳಂಬವಾಗಿದೆ. ಉದ್ದೇಶಿತ ಈ ಕಾಮಗಾರಿ ಫೆಬ್ರವರಿಗೆ ಮುಕ್ತಾಯಗೊಳ್ಳಬೇಕಿತ್ತು, ಇದೀಗ ಮತ್ತೆ ಮೂರು ತಿಂಗಳು ಮುಂದಕ್ಕೆ ಹೋಗಿದೆ.ಮಾಂಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ 2022 ಜುಲೈನಲ್ಲಿ ಆರಂಭಗೊಂಡಿತ್ತು. ಒಟ್ಟು 49 ಕೋಟಿ ರು. ಮೊತ್ತದ ಈ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಸ್ಮಾರ್ಟ್‌ಸಿಟಿ ಕಂಪನಿ ಕೂಡ ಎರಡು ಕಡೆ ಸಂಪರ್ಕ ರಸ್ತೆಯನ್ನು ಪೂರ್ಣಗೊಳಿಸಿದೆ. ಆದರೆ ಫೆಬ್ರವರಿಗೆ ಮುಕ್ತಾಯಗೊಳ್ಳಬೇಕಾದ ಕಾಮಗಾರಿ ಮತ್ತೆ ಮುಂದಕ್ಕೆ ಹೋಗಿದೆ.

ವಿಳಂಬಕ್ಕೆ ತಾಂತ್ರಿಕ ಅಡಚಣೆ:

ಫಾಲ್ಘಾಟ್‌ ರೈಲ್ವೆ ವಿಭಾಗ ಮಾಂಕಾಳಿಪಡ್ಪು ಕೆಳ ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಮೇಲ್ಭಾಗದಲ್ಲಿ ರೈಲು ಹಳಿ ಇದ್ದು, ರೈಲು ಹಾದುಹೋಗಲು ಅಡ್ಡಿಯಾಗದಂತೆ ಕೆಳಗೆ ಕಾಮಗಾರಿ ನಡೆಸುವುದೇ ದೊಡ್ಡ ಸವಾಲು ಇದು. ಸುಮಾರು 14 ಮೀಟರ್‌ ಅಗಲದ ಬಾಕ್ಸ್ ಪೈಕಿ ಎರಡು ಬಾಕ್ಸ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಮಂಗಳೂರು ಜಂಕ್ಷನ್‌ ಕಡೆಗಿನ ಈ ಕಾಮಗಾರಿ ಮುಕ್ತಾಯಗೊಂಡಿದ್ದು, ಮಂಗಳೂರು ಸೆಂಟ್ರಲ್‌ ಕಡೆಗೆ ಇನ್ನೊಂದು ಬಾಕ್ಸ್‌ ಅಳವಡಿಸುವ ಕಾಮಗಾರಿಗೆ ಹಿನ್ನೆಡೆ ಉಂಟಾಗಿತ್ತು.

ಕೊನೆ ಬಾಕ್ಸ್‌ ಅಳವಡಿಸುವ ಕಾಮಗಾರಿಗೆ ಬಂಡೆಯೊಂದು ಅಡ್ಡಿಯಾಗಿದೆ. ಅದನ್ನು ಸ್ಫೋಟಿಸಿ ತೆರವುಗೊಳಿಸುವುದು ಸುಲಭಲ್ಲ. ಕಂಪನದ ತಾಪತ್ರಯ ಬೇಡ ಎಂಬ ಕಾರಣಕ್ಕೆ ಬದಲಿ ತಂತ್ರಜ್ಞಾನ ಮೊರೆ ಹೋಗಿದ್ದಾರೆ. ಹಾಗಾಗಿ ಅಲ್ಲೇ ಕಾಮಗಾರಿ ವೇಳೆ ಮಣ್ಣು ಕುಸಿತವಾಗದಂತೆ ಮೈಕ್ರೋ ಫಿಲ್ಲಿಂಗ್‌ ಅಂದರೆ ಭೂಮಿಗೆ ತೂತು ಕೊರೆದು ತಳಮಟ್ಟದಲ್ಲಿ ಕಾಂಕ್ರಿಟ್‌ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದೆ. ಇದಲ್ಲದೆ ಡಿಸೆಂಬರ್‌ನಲ್ಲಿ ಮಳೆ ಬಂದು ಕೂಡ ಕಾಮಗಾರಿಗೆ ತೊಡಕು ಉಂಟಾಗಿತ್ತು. ಇನ್ನಷ್ಟೆ ಕಾಮಗಾರಿಗೆ ವೇಗ ಸಿಗಲಿದ್ದು, ಏಪ್ರಿಲ್‌ ಅಂತ್ಯಕ್ಕೆ ಬಾಕ್ಸ್‌ ಪುಶ್ಶಿಂಗ್‌ ಕಾಮಗಾರಿ ಮುಕ್ತಾಯಗೊಳ್ಳಲಿದೆ.

ಸ್ಮಾರ್ಟ್‌ಸಿಟಿ ಕಂಪನಿ 29 ಕೋಟಿ ರು.ಗಳಲ್ಲಿ ಎರಡು ಕಡೆ ಕಾಂಕ್ರಿಟ್‌ ಸಂಪರ್ಕ ರಸ್ತೆ ನಿರ್ಮಿಸಿದರೂ ಬಾಕ್ಸ್‌ ಪುಶ್ಶಿಂಗ್‌ ಕಾಮಗಾರಿಗಾಗಿ ತಲಾ 100 ಮೀಟರ್‌ ರಸ್ತೆ ಜೋಡಣೆ ನಡೆಸಿರಲಿಲ್ಲ. ಇದು ಕೂಡ ಬಾಕ್ಸ್‌ ಪುಶ್ಶಿಂಗ್‌ ಕಾಮಗಾರಿ ಮುಕ್ತಾಯಗೊಂಡ ಕೂಡಲೇ ಪೂರ್ಣಗೊಳ್ಳಲಿದೆ. ಮೇ 15ರ ಸುಮಾರಿಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಇರಾದೆ ಹೊಂದಲಾಗಿದೆ. ಬಾಕ್ಸ್‌----

ಟ್ರಾಫಿಕ್‌ ಮುಕ್ತ ಪರ್ಯಾಯ ರಸ್ತೆ

ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಮೋರ್ಗನ್‌ಗೇಟ್‌-ಜೆಪ್ಪು ರಸ್ತೆಯನ್ನು ಬಂದ್‌ ಮಾಡಲಾಗಿತ್ತು. ತೊಕ್ಕೊಟ್ಟು ಕಡೆಗೆ ಮಂಗಳೂರು ನಗರದಿಂದ ಸಂಚರಿಸುವವರಿಗೆ ಇದು ಸುಲಭದ ರಸ್ತೆ. ಮೋರ್ಗನ್‌ಗೇಟ್‌-ಜೆಪ್ಪು ಮೂಲಕ ಜೆಪ್ಪಿನಮೊಗರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುತ್ತದೆ. ಅದೇ ರೀತಿ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಇದೇ ಮಾರ್ಗದಲ್ಲಿ ಆಗಮಿಸಬಹುದು. ಪಂಪ್‌ವೆಲ್‌-ಕಂಕನಾಡಿ ಮೂಲಕ ಸುತ್ತು ಬಳಸಿ ಸಂಚರಿಸುವ ಅಗತ್ಯ ಇರುವುದಿಲ್ಲ. ಈಗ ಜೆಪ್ಪು ರಸ್ತೆ ಬಂದ್ ಆಗಿರುವುದರಿಂದ ಪಂಪ್‌ವೆಲ್‌-ಕಂಕನಾಡಿ ನಡುವೆ ಸಂಚಾರ ದಟ್ಟಣೆ ಕಾಣಿಸಿದೆ. ರೈಲ್ವೆ ಕೆಳಸೇತುವೆ ಸಂಚಾರಕ್ಕೆ ಮುಕ್ತಗೊಂಡರೆ ವಾಹನ ದಟ್ಟಣೆ ತುಸು ನಿವಾರಣೆಯಾಗಲಿದೆ..............

ರೈಲ್ವೆ ಕೆಳ ಸೇತುವೆಗೆ ಬಾಕ್ಸ್‌ ಪುಶ್ಶಿಂಗ್‌ ಕಾಮಗಾರಿ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಇದು ಏಪ್ರಿಲ್‌ಗೆ ಪೂರ್ತಿಯಾಗಲಿದ್ದು, ಬಳಿಕ ಮೇ 15ರ ಸುಮಾರಿಗೆ ಬಾಕಿಯುಳಿದ ಕಾಮಗಾರಿ ಸ್ಮಾರ್ಟ್‌ಸಿಟಿಯಿಂದ ಸಂಪೂರ್ಣಗೊಳ್ಳಲಿದೆ.

-ಅರುಣ್‌ಪ್ರಭ, ಮೆನೇಜರ್‌, ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ