ಲಕ್ಷ್ಮೇಶ್ವರ: ಮಂಕುತಿಮ್ಮನ ಕಗ್ಗ ಕನ್ನಡದ ಸನ್ನಡತೆಯ ಸಗ್ಗ. ಬದುಕಿನ ಎಲ್ಲ ಆಯಾಮಗಳಿಗೆ ಕಗ್ಗದಲ್ಲಿ ಉತ್ತರಗಳಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಹೇಳಿದರು.
ಯುವ ಸಾಹಿತಿ ಯಲ್ಲಾಪುರದ ಮಹಾಂತೇಶ ಅಕ್ಕೂರ ಮಾತನಾಡಿ, ಮಂಕುತಿಮ್ಮನ ಕಗ್ಗ ಇದು ಕನ್ನಡದ ಭಗವದ್ಗೀತೆ. ಯುವಕರು, ವಿದ್ಯಾರ್ಥಿಗಳಾದಿಯಾಗಿ ಸರ್ವರಿಗೂ ಇದು ಅದ್ಭುತ ಸಂದೇಶ ನೀಡುತ್ತದೆ. ಪ್ರತಿಯೊಬ್ಬ ಕನ್ನಡಿಗರೂ ಇದನ್ನು ಓದಬೇಕು ಎಂದರು. ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಸಂಗಮೇಶ ಅಂಗಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯಿಕ ಚಟುವಟಿಕೆ ನಡೆಯುವುದೇ ಅಪರೂಪ. ಅಂಥದ್ದರಲ್ಲಿ ಕಸಾಪವು ಯಲ್ಲಾಪುರದಂಥ ಕುಗ್ರಾಮದಲ್ಲಿ ಇಂತಹ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಹಿರಿಯ ಶಿಕ್ಷಕ ಸುರೇಶ ಹುಡೇದ ಮಾತನಾಡಿ, ಮಂಕುತಿಮ್ಮನ ಕಗ್ಗ ನಾಲ್ಕು ಸಾಲುಗಳ ಚೌಪದಿಯಾಗಿದೆ. ಕಗ್ಗ ಬಲ್ಲವನು ಯಾವುದಕ್ಕೂ ಜಗ್ಗುವುದಿಲ್ಲ ಎಂದರು.ಸಿಆರ್‌ಪಿ ಶಿವಾನಂದ ಅಸುಂಡಿ ಮಾತನಾಡಿದರು. ಗ್ರಾಮದ ಪ್ರಗತಿಪರ ರೈತ ಗೂಳಪ್ಪ ಅಕ್ಕೂರ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಪಾರಂಪರಿಕ ನಾಟಿ ವೈದ್ಯ ತಿರುಕಪ್ಪ ಪ್ಯಾಟಿ, ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ ಅಂಗಡಿ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಲಮಾಣಿ, ಚಂದ್ರಶೇಖರ ಅಂಗಡಿ, ಮಹಾಂತಗೌಡ ಪಾಟೀಲ, ನಾಗಪ್ಪ ಅಕ್ಕೂರ, ದ್ಯಾಮಕ್ಕ ಅಕ್ಕೂರ ಇದ್ದರು.
ವಿದ್ಯಾರ್ಥಿನಿಯರಾದ ಹರ್ಷಿತಾ ಅಕ್ಕೂರ, ಸಮೀಕ್ಷಾ ಅಂಗಡಿ, ಶ್ರೀರಕ್ಷಾ ಅಕ್ಕೂರ, ಪ್ರಕೃತಿ ಅಕ್ಕೂರ ಅವರು ಕಗ್ಗದ ಸವಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸೌಮ್ಯಾ ಪಾಟೀಲ, ಯಶೋದಾ ದಾನಣ್ಣನವರ ಅವರು ಕವಿ ಡಿವಿಜಿಯವರ ಕೃತಿಗಳ ಪರಿಚಯ ಮಾಡಿಕೊಟ್ಟರು. ಯುವಕವಿ ಗಣೇಶ ಪಾಟೀಲ ಸ್ವರಚಿತ ಕವನ ವಾಚಿಸಿದರು.ಕಸಾಪ ಸಲಹಾ ಸಮಿತಿಯ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ ಲಮಾಣಿ ವಂದಿಸಿದರು. ಕಸಾಪ ಘಟಕದ ಈರಣ್ಣ ರಿತ್ತಿ, ಶಿಕ್ಷಕ ಸತೀಶ ಸ್ವಾದಿ ಹಾಗೂ ಗ್ರಾಮದ ಸಾಹಿತ್ಯಾಭಿಮಾನಿಗಳು, ಹಿರಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.