ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಂಡ ಮಣ್ಣೆತ್ತಿನ ಅಮಾವಾಸ್ಯೆ

KannadaprabhaNewsNetwork | Published : Jul 5, 2024 12:47 AM

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಗಾರು ಮಳೆಯು ಸಮೃದ್ಧವಾಗಿದ್ದು, ರೈತಾಪಿ ವರ್ಗವೂ ಮಣ್ಣೆತ್ತು ಪೂಜಿಸುವ ಮೂಲಕ ಮಳೆ, ಬೆಳೆಯು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ.

ಮಣ್ಣಿಗಿಂತ ಪಿಒಪಿಯ ಎತ್ತುಗಳಿಗೆ ಭಾರಿ ಬೇಡಿಕೆ

ಕುಲಕಸುಬು ನಂಬಿದ ಕುಂಬಾರರ ಬದುಕು ಅತಂತ್ರ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಗಾರು ಮಳೆಯು ಸಮೃದ್ಧವಾಗಿದ್ದು, ರೈತಾಪಿ ವರ್ಗವೂ ಮಣ್ಣೆತ್ತು ಪೂಜಿಸುವ ಮೂಲಕ ಮಳೆ, ಬೆಳೆಯು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಸ್ಥಳೀಯ ಕುಂಬಾರರು ವಿವಿಧ ಬಗೆಯ ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.

ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಪೂಜೆಗಾಗಿ ತಯಾರಿಸಿರುವ ಮಣ್ಣಿನ ಎತ್ತುಗಳ ಮಾರಾಟ ನಡೆದಿತ್ತು. ಸಾರ್ವಜನಿಕರು ಸಂಭ್ರಮದಿಂದ ಮಣ್ಣೆತ್ತು ಖರೀದಿಸಿದರು. ಎತ್ತುಗಳ ಅಳತೆಯ ಮೇಲೆ ಅವುಗಳಿಗೆ ದರ ನಿಗದಿ ಮಾಡಲಾಗಿದೆ. ಪಿಒಪಿ ಎತ್ತುಗಳಿಗೆ ಬೇಡಿಕೆ:

ಸಮೀಪದ ಕೆರೆಯಿಂದ ಮಣ್ಣು ತಂದು ಅದನ್ನು ಹದಗೊಳಿಸಿ ಮಣ್ಣಿನ ಎತ್ತು ತಯಾರಿಸಲಾಗುತ್ತಿದೆ. ಆದರೆ ಈಗ ಅದಕ್ಕೆ ಬೇಡಿಕೆ ಇಲ್ಲದಂತಾಗಿದೆ. ಈಗ ಮಹಾರಾಷ್ಟ್ರದ ಸೊಲ್ಲಾಪುರದಿಂದ ಪಿಒಪಿ ಮಣ್ಣಿನ ಮೂರ್ತಿಗಳು ಪಟ್ಟಣಕ್ಕೆ ಬಂದಿವೆ. ಗ್ರಾಹಕರು ಅವುಗಳನ್ನೇ ಹೆಚ್ಚಾಗಿ ಕೇಳುತ್ತಾರೆ. ಮಣ್ಣಿಗಿಂತ ಪಿಒಪಿ ಎತ್ತುಗಳಿಗೆ ಬೇಡಿಕೆ ಇದೆ.

ಮಣ್ಣೆತ್ತು ಜೋಡಿಗೆ ₹20ರಿಂದ 100 ದರ ಇದ್ದು, ಪಿಒಪಿ ಎತ್ತು ಜೋಡಿಗೆ ₹50ರಿಂದ 500ರವರೆಗೆ ಮಾರಾಟ ಮಾಡಲಾಗುತ್ತಿದೆ.

ಪಟ್ಟಣ ಹಾಗೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಮಣ್ಣಿನ ಎತ್ತುಗಳನ್ನು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುವ ಮೂಲಕ ಆಚರಣೆ ಮಾಡುತ್ತಾರೆ.

ಸುಮಾರು 50 ವರ್ಷಗಳಿಂದ ನಮ್ಮ ಮನೆಯಲ್ಲಿ ಮಣ್ಣೆತ್ತು ತಯಾರು ಮಾಡುತ್ತಿದ್ದು, ನಾವು ಜಹಗೀರಗುಡದೂರ ಕೆರೆಯಿಂದ ಮಣ್ಣು ತಂದು ತಯಾರಿಸುತ್ತೇವೆ. ಆದರೆ ಈ ವರ್ಷ ಪಿಒಪಿ ಎತ್ತುಗಳು ಮಾರಾಟಕ್ಕೆ ಬಂದ ಹಿನ್ನೆಲೆ ನಮ್ಮ ಮಣ್ಣೆತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಕುಷ್ಟಗಿ ನಿವಾಸಿ ಸಂಗಪ್ಪ ಕುಂಬಾರ ತಿಳಿಸಿದ್ದಾರೆ.

Share this article