ಬಿಜಿ ಪುರದಲ್ಲಿ ಮಾ.29ರಂದು ಮಂಟೇಸ್ವಾಮಿ ಜಾತ್ರಾ ಮಹೋತ್ಸವ: ಸಕಲ ಸಿದ್ಧತೆ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ಅಜ್ಞಾನವನ್ನು ಹೋಗಲಾಡಿಸಲು ಕತ್ತಲ ನಾಡಿಗೆ ಜ್ಞಾನದ ಬೆಳಕು ಪರಂಜ್ಯೋತಿಯಾಗಿ, ಮೌಢ್ಯತೆಯನ್ನು ದಿಕ್ಕರಿಸಿದ ಪವಾಡ ಪುರುಷ ಮಂಟೇಸ್ವಾಮಿ ಅವರ ಜಾತ್ರಾ ಮಹೋತ್ಸವವು ಮಾ.29ರಂದು ಅಮಾವಾಸ್ಯೆಯಂದು ತಾಲೂಕಿನ ರಾಜ ಬೊಪ್ಪೇಗೌಡನಪುರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಲಿದೆ.

ಸಿ.ಸಿದ್ದರಾಜು ಮಾದಹಳ್ಳಿ

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಅಜ್ಞಾನವನ್ನು ಹೋಗಲಾಡಿಸಲು ಕತ್ತಲ ನಾಡಿಗೆ ಜ್ಞಾನದ ಬೆಳಕು ಪರಂಜ್ಯೋತಿಯಾಗಿ, ಮೌಢ್ಯತೆಯನ್ನು ದಿಕ್ಕರಿಸಿದ ಪವಾಡ ಪುರುಷ ಮಂಟೇಸ್ವಾಮಿ ಅವರ ಜಾತ್ರಾ ಮಹೋತ್ಸವವು ಮಾ.29ರಂದು ಅಮಾವಾಸ್ಯೆಯಂದು ತಾಲೂಕಿನ ರಾಜ ಬೊಪ್ಪೇಗೌಡನಪುರ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಲಿದೆ.

ಉತ್ತರ ನಾಡಿನಿಂದ ದಕ್ಷಿಣದ ಕಡೆಗೆ ಆಗಮಿಸಿದ ಮಂಟೇಸ್ವಾಮಿ ಅವರು ನಿಲಗಾರರ ಪರಂಪರೆ ಹುಟ್ಟುಹಾಕಿ ಮೂಢನಂಬಿಕೆ ಮತ್ತು ಅಜ್ಞಾನ ಹೋಗಲಾಡಿಸುವ ನಿಟ್ಟಿನಲ್ಲಿ ದೊಡ್ಡ ಶಿಷ್ಯರನ್ನು ಪಡೆದು 15ನೇ ಶತಮಾನದಲ್ಲಿ ಜನರಲ್ಲಿರುವ ಅಹಂಕಾರ ಮತ್ತು ಮೂಢನಂಬಿಕೆ ತೊಲಗಿಸಲು ಪಣತೊಟ್ಟು ಅಮಾವಾಸ್ಯೆ ಶನಿವಾರ ಅಶುಭ ಎನ್ನುವ ದಿನಗಳಲ್ಲಿ ಜಾತ್ರೆ ನಡೆಸಲಾಗುತ್ತಿದೆ.

ಅಶುಭ ದಿನಗಳಲ್ಲೇ ಉತ್ತಮ ನಿರ್ಣಯ ಕೈಗೊಂಡು ಜನರಲ್ಲಿರುವ ಮೂಢನಂಬಿಕೆ ತೊಲಗಿಸಲು ಯುಗಾದಿ ಅಮಾವಾಸ್ಯೆ ವೇಳೆ ಐಕ್ಯ ಸ್ಥಳದಲ್ಲಿ ಜಾತ್ರೆ ನಡೆಯಬೇಕೆಂಬ ಸೂಚನೆ ಮೆರೆಗೆ ಬಿಜಿಪುರದಲ್ಲಿ ಎದುರು ಸೇವೆ ಮುಂದುವರಿಸಿಕೊಂಡು ಬರಲಾಗುತ್ತಿದೆ.

ಮಂಟೇಸ್ವಾಮಿ ಹೆಸರು ನಾಮಕರಣ:

ಧರೆಗೆ ದೊಡ್ಡವರು ರೇವಣ್ಣ ಸಿದ್ದೇಶ್ವರ ಬೆಟ್ಟದ ಕಡೆಯಿಂದ ಬೊಪ್ಪಸಮುದ್ರದ ಹಾದಿಯಲ್ಲಿ ಹೊನ್ನಾಯಕನಹಳ್ಳಿಗೆ ಆಗಮಿಸಿದಾಗ ಬಳೆ ಮುದ್ದಮ್ಮ ಹಾಲು ಕರೆಯುವ ಸಮಯದಲ್ಲಿ ಪರಂಜ್ಯೋತಿಯು ಭಿಕ್ಷಕ್ಕೆ ಬರುತ್ತಾರೆ. ಅವರ ತಂಬೂರಿ, ಜಗಟೆ ಸ್ವರ ಕೇಳಿದ ಕಾಮಧೇನು ಬೆದರಿ ಹಾಲು ಕರೆಯುತ್ತಿರುವ ಮುದ್ದಮ್ಮನನ್ನು ಒದೆಯುತ್ತದೆ. ಇದರಿಂದ ಕೆಳಗೆ ಬಿದ್ದ ಮುದ್ದಮ್ಮ ಪರಂಜ್ಯೋತಿ ಅವರನ್ನು ಆಳಾದ ‘ಮಂಟ್ಯಾಗೋನೆ’ ಎಂದು ಬೈಯ್ಯುತ್ತಾಳೆ.

ಈ ಮಾತು ಕೇಳಿದ ಧರೆಗೆ ದೊಡ್ಡವರು ಕೋಪಗೊಳ್ಳದೆ ನಗುತ್ತಲೇ ನನಗೆ ನಾಮಕರಣ ಮಾಡಿದ ಮೊದಲ ಶರಣೆ ತಾಯೇ. ನಾನು ಹುಟ್ಟಿದಾಗಿನಿಂದ ನನಗೆ ಯಾರು ಹೆಸರು ಕಟ್ಟಿರಲಿಲ್ಲ. ನೀನು ಕರೆದ ‘ಮಂಟ್ಯಾಗೋನೆ’ ಎಂಬ ಹೆಸರು ನನಗೆ ಪ್ರಿಯವಾಗಿದ್ದು, ಇನ್ನು ಮುಂದೆ ‘ಮಂಟೇದಲಿಂಗಯ್ಯ’ನಾಗಿ ಸೂರ್ಯ, ಚಂದ್ರ ಇರುವವರೆಗೂ ನೀ ಕರೆದ ಹೆಸರು ಸ್ಥಿರವಾಗಿರಲಿ ಎಂದು ಮುದ್ದಮ್ಮನಿಗೆ ಹರಸಿ, ಭಾಗ್ಯವನ್ನು ನೀಡಿದ ಮಂಟೇಸ್ವಾಮಿ ಅವರು ಮುದ್ದಮ್ಮನ ಮನೆಯನ್ನೇ ಮಠವಾಗಿಸಿದರು. ಮಠದ ಮಠಾಧೀಪತಿಗಳಾಗಿ ರಾಜವಂಶಸ್ಥರಾದ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಅವರು ನೇಮಕಗೊಂಡು ಮಂಟೇಸ್ವಾಮಿ ಅವರ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಒಂದು ವರ್ಷ ಮಳವಳ್ಳಿ ಮಂಟೇಸ್ವಾಮಿ ಮಠದ ಸ್ವಾಮೀಜಿಗಳು ಹಾಗೂ ಮತ್ತೊಂದು ವರ್ಷ ಬಿಜಿಪುರದ ಮಂಟೇಸ್ವಾಮಿ ಮಠದ ಸ್ವಾಮೀಜಿಗಳು ಎದುರು ಸೇವೆ ಮಠಕ್ಕೆ ನುಗ್ಗುವ ಸಂಪ್ರದಾಯವಿದೆ. ಯುಗಾದಿ ಹಬ್ಬದ ಒಂದು ತಿಂಗಳ ಮುಂಚಿತವಾಗಿ ಪ್ರಸಕ್ತ ವರ್ಷ ಒಂದು ತಿಂಗಳು ನಡೆಯಲಿರುವ ಕಪ್ಪಡಿ ರಾಚಪ್ಪಾಜಿ ಜಾತ್ರೆ ಮುಗಿಸಿ ಬರುವ ಬಿಜಿಪುರದ ಶ್ರೀ ಮಂಟೇಸ್ವಾಮಿ ಮಠದ ಪೀಠಾಧಿಕಾರಿಗಳಾದ ಶ್ರೀ ಜ್ಞಾನನಂದ ಚೆನ್ನರಾಜೇ ಅರಸು ಸ್ವಾಮೀಜಿಗಳು ಮುಟ್ಟನಹಳ್ಳಿ ತೋಪಿನ ದೊಡ್ಡಮ್ಮತಾಯಿ ದೇವಸ್ಥಾನದಿಂದ ತಮಟೆ, ಬಸವ, ಕೊಂಬು, ಕಹಳೆ ಹಾಗೂ ನೀಲಗಾರರು ಸಾಂಪ್ರದಾಯಿಕವಾಗಿ ವಿಧಿ ವಿಧಾನಗಳೊಂದಿಗೆ ಮಠ ನುಗ್ಗುತ್ತಾರೆ.

ಮಳವಳ್ಳಿ ಶ್ರೀಮಂಟೇಸ್ವಾಮಿ ಮಠದ ಮಠಾಧಿಪತಿಗಳಾದ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸು ಸ್ವಾಮೀಜಿ ಜೊತೆಯಲ್ಲಿ ಪಟ್ಟದ ಬಸವ ಹಾಗೂ ಕೊಂಬು, ಕಹಳೆ, ಬಿರುದುಗಳ ಮೂಲಕ ರಾಜಬೀದಿ ಮೂಲಕ ಸ್ವಾಮೀಜಿಗಳನ್ನು ಮಠದ ಒಳಕ್ಕೆ ಬರಮಾಡಿಕೊಳ್ಳುತ್ತಾರೆ. ಮರುದಿನ ಪಂಕ್ತಿಸೇವೆ, ಸಾರಪಂಕ್ತಿ ಸೇರಿದಂತೆ ಒಟ್ಟು ಐದು ಪಂಕ್ತಿಗಳು ನಡೆಯುವುದು ವಿಶೇಷವಾಗಿದೆ.

ಲಕ್ಷಾಂತರ ಮಂದಿ ಆಗಮನ:

ರಾಜಬೊಪ್ಪೇಗೌಡನಪುರ (ಬಿ.ಜಿಪುರ) ದಲ್ಲಿ ನಡೆಯಲಿರುವ ಮಂಟೇಸ್ವಾಮಿ ಜಾತ್ರೆಗೆ ಯಾವುದೇ ಪ್ರಚಾರ ಪಡಿಸದಿದ್ದರೂ ಅಮಾವಾಸ್ಯೆ ದಿನದಂದು ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಕೈಯಲ್ಲಿ ಕಂಡಾಯ, ಬೆತ್ತ, ಕಂಕಲಲ್ಲಿ ಜೋಳುಗೆಯೊಂದಿಗೆ ಪೀಠಾಧೀಪತಿಗಳು ನಡೆಸುವ ಮೆರವಣಿಗೆಯಲ್ಲಿ ಪಾಲ್ಗೊಂಡು ಜಾತ್ರೆಗೆ ಮೆರಗು ನೀಡಲಿದ್ದಾರೆ.

ಪೊಲೀಸ್ ಬಂದೋಬಸ್ತ್:

ಮಂಟೇಸ್ವಾಮಿ ಜಾತ್ರೆಗೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಡಿವೈಎಸ್ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಕೂಟರ್ ಹಾಗೂ ಕಾರುಗಳಿಗೆ ಪ್ರತ್ಯೇಕ ಸ್ಥಳ ನಿಗಧಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಭಕ್ತರಿಗೆ ಮೂಲ ಸೌಲಭ್ಯ:

ಮಠಕ್ಕೆ ಆಗಮಿಸುವ ಭಕ್ತರಿಗೆ ನೆರಳು, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಂಟೇಸ್ವಾಮಿ ಮಠದಿಂದ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಹರಕೆ ವೊತ್ತ ಭಕ್ತರು ಪಾನಕ ಮತ್ತು ಮಜ್ಜಿಗೆ ವಿತರಿಸಲಿದ್ದಾರೆ. ಯುಗಾದಿಯಂದು ಮಂಟೇಸ್ವಾಮಿ ಜಾತ್ರೆ ವಿಶೇಷವಾಗಿ ಗ್ರಾಮದ ಉದ್ದಕ್ಕೂ ವಿವಿಧ ಬಣ್ಣದ ದೀಪಾಲಾಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ವಿವಿಧ ಹೂಗಳಿಂದ ಆಲಂಕರಿಸಲಾಗಿದೆ. ಶುಭ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

Share this article