ಕನ್ನಡಪ್ರಭ ವಾರ್ತೆ ಮುದಗಲ್
ತೃತಿಯ ಮಂತ್ರಾಲಯವೆಂದೇ ಕರೆಯಲ್ಪಡುವ ಐತಿಹಾಸಿಕ ಮುದಗಲ್ ಪಟ್ಟಣದ ಕಿಲ್ಲಾದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 50 ವರ್ಷಗಳ ಸಂಭ್ರಮ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳೊಂದಿಗೆ ರಾಘವೇಂದ್ರಸ್ವಾಮಿಗಳ ಆರಾಧನೆ ಆಯೋಜಿಸಿದ್ದು, ಅದರ ಪ್ರಯುಕ್ತವಾಗಿ ಮಂತ್ರಾಲಯ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಇದೇ ಜು. 20ರಂದು ಪಟ್ಟಣಕ್ಕೆ ಆಗಮಸಲಿದ್ದಾರೆ ಎಂದು ಶ್ರೀಮಠದ ಅಧ್ಯಕ್ಷ ನಾರಾಯಣರಾವ್ ದೇಶಪಾಂಡೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಭಕ್ತರಿಂದ ಪಾದಪೂಜೆ ಸ್ವೀಕರಿಸಲಿರುವ ಶ್ರೀಗಳು ನಂತರ ಭಕ್ತರಿಗೆ ಮುದ್ರಾಧಾರಣೆ ಮಾಡಲಿದ್ದಾರೆ. ಇದರೊಟ್ಟಿಗೆ ಪರಿಮಳ ಗುರುಕುಲ ವೀಕ್ಷಣೆ, ಶ್ರೀರಾಮ ದೇವರ ಸಂಸ್ಥಾನ ಪೂಜೆ, ಆಶೀರ್ವಚನ, ಮಹಾಪ್ರಸಾದ ಸೇವೆಗಳ ಮೂಲಕ 50ರ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಜು.31ರಂದು ರಾಯರ ಬೃಂದಾವನ ಪುನರ್ ಪ್ರತಿಷ್ಠಾಪನೆ, ಮುಂತ್ರಾಲಯ ಗುರು ಸಾರ್ವಭೌಮದಾಸ ಸಾಹಿತ್ಯ ಪ್ರೊಜೆಕ್ಟ್ ವಿಶೇಷ ಅಧಿಕಾರಿ ಕೆ.ಅಪ್ಪಣಾಚಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಸಂದೇಶ, ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.ಆ.7 ರಿಂದ 13ರವರೆಗೆ ಪಂಡಿತ್ ಗೋಪಿನಾಥಾಚಾರ್ಯ ಗಲಗಲಿ ಇವರಿಂದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. 8 ಕ್ಕೆ ಗುರುಸಾರ್ವಭೌಮರ ಗ್ರಾಮ ಪ್ರದಕ್ಷಿಣೆ ಜರುಗಲಿದೆ. ದಆ. 9 ಕ್ಕೆ ಯಜುರ್ವೇದಿಯ ಉಪಾಕರ್ಮ, 10 ರಂದು ಪೂರ್ವಾರಾಧನೆ, 11 ಕ್ಕೆ ಮಧ್ಯಾರಾಧನೆ ಮತ್ತು 12 ರಂದು ಉತ್ತರಾರಾಧನೆ ಹಾಗೂ 13ರಂದು ಅವಕೃತ ಕಾರ್ಯಕ್ರಮ ಜರುಗಲಿದೆ.
ಆರಾಧನೆಗಳ ದಿನದಂದು ದಿನಂಪ್ರತಿಯಾಗಿ ಸುಪ್ರಭಾತ, ವಿಷ್ಣು ಸಹಸ್ರನಾಮ, ರಾಯರ ಅಷ್ಟೋತ್ತರ, ಅಶ್ವತ್ಥ ನಾರಾಯಣ, ವಿಷ್ಣು ಸಹಸ್ರನಾಮ, ರಾಘವೇಂದ್ರ ಅಷ್ಟಾಕ್ಷರ ಹೋಮ, ಪಂಚಾಮೃತಾಭಿಷೇಕ, ಭಾಗವತ ಸಪ್ತಾಹ, ಸಾಮೂಹಿಕ ಸತ್ಯನಾರಾಯಣ ಪೂಜೆ, ಅಲಂಕಾರ ಸೇವೆ. ಮಹಾಪ್ರಸಾದ, ಭಜನೆ-ಅಂದಣೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತವೆ ಎಂದು ತಿಳಿಸಿದರು. ಡಾ: ಗುರುರಾಜ ದೇಶಪಾಂಡೆ, ವೆಂಕಟೇಶ ಕುಲಕರ್ಣಿ ಇದ್ದರು.