ಜಾನಪದ ಅಂಶಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಶೋಧ-ಪ್ರೊ. ಟಿ.ಎಂ. ಭಾಸ್ಕರ್

KannadaprabhaNewsNetwork | Published : Mar 24, 2024 1:32 AM

ಸಾರಾಂಶ

ಜಾನಪದ ಲೋಕದ ಅನೇಕ ಅಂಶಗಳನ್ನು ಇಟ್ಟುಕೊಂಡು ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಹಲವಾರು ಶೋಧ ಕಾರ್ಯ ಮಾಡುತ್ತಿದ್ದಾರೆ. ಗಿಡಮೂಲಿಕೆಗಳ ರಸದೌಷಧಿಯಿಂದ ಬಂಗಾರದ ಬೆಲೆ ತೆಗೆಯುವಂತ ಶೋಧ ನಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ.ಎಂ. ಭಾಸ್ಕರ್ ಅವರು ಹೇಳಿದರು.

ಶಿಗ್ಗಾವಿ: ಜಾನಪದ ಲೋಕದ ಅನೇಕ ಅಂಶಗಳನ್ನು ಇಟ್ಟುಕೊಂಡು ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಹಲವಾರು ಶೋಧ ಕಾರ್ಯ ಮಾಡುತ್ತಿದ್ದಾರೆ. ಗಿಡಮೂಲಿಕೆಗಳ ರಸದೌಷಧಿಯಿಂದ ಬಂಗಾರದ ಬೆಲೆ ತೆಗೆಯುವಂತ ಶೋಧ ನಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ಹೇಳಿದರು. ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ ಜಿಲ್ಲಾ ಮತ್ತು ಶಿಗ್ಗಾಂವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿ ಕಲಾವಿದರ ಬಳಗದಿಂದ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಆಯೋಜಿಸಲಾದ ಸುವರ್ಣ ಕರ್ನಾಟಕ ಸಂಭ್ರಮ -50 ಮೂವರು ಜನಪದರಿಗೆ ಗೌರವ, ಜಾನಪದ ಕಣಜಗಳು ಎಂಬ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ಜಾನಪದ ಮೂಲ ಸೆಲೆ ಎಲ್ಲಾ ಶಾಸ್ತ್ರಗಳಿಗೆ ತಾಯಿ ಬೇರು ಆಗಿದೆ. ಆದ್ದರಿಂದ ಸಾಹಿತ್ಯ ಪರಿಷತ್ತು ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಷಯ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರಪಂಚದ ಏಕೈಕ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಇದೆ. ಮುಂದೊಂದು ದಿನ ವಿಶ್ವಮಟ್ಟದಲ್ಲಿ ಇದರ ಕೀರ್ತಿ ಹೆಚ್ಚಾಗಲಿದೆ. ಜಾನಪದ ಇಲ್ಲದೆ ಜನರಿಲ್ಲ, ಜನರಿಲ್ಲದೆ ಜಾನಪದವಿಲ್ಲ, ಜಾನಪದ ಕಣಜ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ ಅರ್ಥಪೂರ್ಣವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಮಾತನಾಡಿ, ಆಂಗ್ಲ ಮಾಧ್ಯಮದ ಹಾವಳಿಯಿಂದ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಕನ್ನಡ ಸಂಸ್ಕೃತಿ ಸಂಬಂಧಗಳ ಮೌಲ್ಯ ಮರೆಯುತ್ತಿದ್ದೇವೆ. ನಮ್ಮ ಶ್ರೀಮಂತ ಸಂಸ್ಕೃತಿ ಬೆಳೆಯಬೇಕಾದರೆ ಮಕ್ಕಳಿಗೆ ಜನಪದ ಸಂಸ್ಕೃತಿಯ ಜ್ಞಾನ ನೀಡಬೇಕು ಎಂದರು.

ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಪ್ಪ ಸೊಬಟಿ ಅವರು ಹೊಸ ಜನಪದ ಸಾಹಿತ್ಯ ಸೃಷ್ಟಿಯ ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಜನಪದ ಕಲಾವಿದರನ್ನು ಅಭಿವ್ಯಕ್ತ ಪಡಿಸುವ ಹಾಗೂ ಅವರನ್ನು ಪರಿಚಯಿಸುವ ಕೆಲಸಗಳಾಗುತ್ತಿವೆ. ಆ ರೀತಿ ಆಲೋಚನಾ ಕ್ರಮಗಳು ಹೆಚ್ಚಾಗಬೇಕು, ಇನ್ನೂ ಹೆಚ್ಚು ಪ್ರಚಲಿತವಾಗಬೇಕು. ಮಾನವೀಯ ಮೌಲ್ಯಗಳನ್ನು ಸಾರುವ ಅನೇಕ ಸಂದೇಶ ಕೊಡಬಹುದಾದ ಜನಪದ ಗೀತೆಗಳು, ಸಾಹಿತ್ಯ ಸಿಗುತ್ತವೆ, ಜಾನಪದ ಅಧ್ಯಯನಕಾರರು ತಾತ್ವಿಕ ನೆಲೆಗಟ್ಟಿನಲ್ಲಿ ನೋಡಬೇಕು ಎಂದರು. ಹಿರಿಯ ಸಾಹಿತಿಗಳಾದ ಡಾ.ಶಾರದಾ ಮಳ್ಳೂರ, ಶ್ರೀ ಚನ್ನಪ್ಪ ಕುನ್ನೂರು ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ನಾಗರಾಜ ದ್ಯಾಮನಕೊಪ್ಪ, ಮಾತನಾಡಿದರು. ಹಿರಿಯ ದೊಡ್ದಾಟ ಕಲಾವಿದರಾದ ಪಕ್ಕೀರಪ್ಪ ಗೌರಕ್ಕನವರ, ಜಾನಪದ ಹಾಡುಗಾರರಾದ ಹವಳೆಮ್ಮ ಬಸವನಾಯ್ಕರ, ಡೊಳ್ಳಿನ ಪದಗಳ ಹಾಡುಗಾರರಾದ ಬೀರಪ್ಪ ಬಿಜ್ಜೀಗಾರ ಅವರು ಕಲಾ ಪ್ರದರ್ಶನ ನೀಡಿ ಸನ್ಮಾನ ಸ್ವೀಕರಿಸಿದರು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್, ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಸಾಹಿತಿ ಕಲಾವಿದ ಬಳಗದ ಸಂಯೋಜಕ ಪೃಥ್ವಿರಾಜ ಬೆಟಗೇರಿ ಉಪಸ್ಥಿತರಿದ್ದರು. ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿದರು. ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಾವು ಜನಪದ ಕಲೆ ಪ್ರದರ್ಶನ ಹಾಗೂ ಅದನ್ನು ಹೊಸಬರಿಗೆ ಕಲಿಸಲು ಸಂಭಾವನೆಗಾಗಿಯೇ ಮಾಡಿದವರಲ್ಲ. ನಮ್ಮಿಂದ ಇನ್ನೊಬ್ಬರಿಗೆ ಈ ಕಲೆ ಮುಂದುವರೆಯಬೇಕು ಎಂಬ ಸದುದ್ದೇಶದಿಂದ ಊರೂರಿಗೆ ಹೋಗಿ ಕಲಿಸಿದ್ದೇವೆ, ಪ್ರದರ್ಶನ ನೀಡಿದ್ದೇವೆ ಎಂದು ಹಿರಿಯ ದೊಡ್ಡಾಟ ಕಲಾವಿದ ಫಕೀರಪ್ಪ ಗೌರಕ್ಕನವರ ಹೇಳಿದರು.

Share this article