ಹಾವೇರಿ: ಉದ್ಯೋಗ ಮೇಳಗಳ ಮೂಲಕ ಅನೇಕ ಉದ್ಯೋಗಾವಕಾಶಗಳು ಯುವ ಪೀಳಿಗೆಯನ್ನು ಹುಡುಕಿಕೊಂಡು ಬರುತ್ತಿದ್ದು, ಇದರ ಸದ್ಬಳಕೆ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಎಂದು ಧಾರವಾಡದ ಸಮರ್ಥನಂ ಅಂಗವಿಕಲರ ಸಂಸ್ಥೆ ಮುಖ್ಯಸ್ಥ ಉದಯಕುಮಾರ ಬಾಗುನವರ ಹೇಳಿದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಚೈತನ್ಯಕುಮಾರ ಮೊಹತೆ ಮಾತನಾಡಿ, ಹಿಂಜರಿಕೆ ಬೇಡ, ಬದ್ಧತೆ ಇರಬೇಕು. ಉದ್ಯೋಗ ಯಾವುದೇ ಇರಲಿ, ಸಿಕ್ಕ ಉದ್ಯೋಗ ಪಡೆದುಕೊಂಡು ಉನ್ನತ ಹುದ್ದೆಗಳ ಕಡೆಗೆ ನಡೆಯಬೇಕು. ನಿಮ್ಮ ಬೆಳವಣಿಗೆಯ ಜತೆಗೆ ಸಮಾಜ, ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ವಿವಿಯ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಅಂಧರು ಇಂದು ಸಾಹಸ ಮಾಡುತ್ತಿದ್ದಾರೆ. ನೀವು ಅವರನ್ನು ನೋಡಿ ನಿಮ್ಮ ಜೀವನದ ಬದಲಾವಣೆಯನ್ನು ಕಂಡುಕೊಂಡು ಮುನ್ನಡೆಯಬೇಕಾಗಿದೆ. ಈ ಜಿಲ್ಲೆಯ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವುದೇ ನಮ್ಮ ವಿವಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಕೌಶಲ್ಯ, ನೈಪುಣ್ಯತೆ, ಸಂಹವನ, ಸಂದರ್ಶನಗಳನ್ನು ಕಲಿಯಲು ಇದು ಒಳ್ಳೆಯ ಅವಕಾಶವಾಗಿದೆ ಎಂದು ಹೇಳಿದರು.ಅಂಗವಿಕಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಹಾವೇರಿ ವಿವಿಯಲ್ಲಿ ಒಂದು ವಿಶೇಷ ಘಟಕ ಸ್ಥಾಪಿಸುವುದಾಗಿ ತಿಳಿಸಿದರು. ಪ್ರತಿ ವರ್ಷ ನಮ್ಮ ವಿವಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತೇವೆ ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ, ಉಪಕುಲಸಚಿವ ಡಾ. ಮನೋಹರ ಕೋಳಿ, ಕಾರ್ಯಕ್ರಮ ಸಂಯೋಜಕಿ ಗೀತಾ ಬೆಳಗಾವಿ ಇತರರು ಇದ್ದರು. ಡಾ. ರೇಖಾ ಬಾಲೋಜಿ ಸ್ವಾಗತಿಸಿದರು. ಸಂಗೀತಾ ಬೆಳವತ್ತಿ ಕಾರ್ಯಕ್ರಮ ನಿರೂಪಿಸಿದರು.