ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ನನ್ನನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ಹಲವರು ಸುಳ್ಳು ದೂರು ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಎಂ.ಎಸ್.ಚಲುವರಾಜು ಆರೋಪಿಸಿದ್ದಾರೆ.
ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ನಾವು ಸಲ್ಲಿಸಿರುವ ದಾಖಲೆಗಳನ್ನು ವಿಭಾಗದ ಮುಖ್ಯಸ್ಥರು ಕಾಲೇಜಿನಿಂದ ಅಥವಾ ವಿವಿಯಿಂದ ನೇಮಕವಾಗಿರುವ ಅತಿಥಿ ಉಪನ್ಯಾಸಕ ನೇಮಕಾತಿ ಸಂಯೋಜಕರು ಹಾಗೂ ಅಂತಿಮವಾಗಿ ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಅನುಮೋದನೆ ನೀಡಿರುತ್ತಾರೆ ಎಂದು ಹೇಳಿದ್ದಾರೆ.
ಎಂಫಿಲ್ ಪದವಿ ಹಾಗೂ ಇತರೆ ಎಲ್ಲಾ ದಾಖಲೆಗಳನ್ನು ಆಯಾಯ ಶೈಕ್ಷಣಿಕ ಸಾಲಿನಲ್ಲಿ ಪರಿಶೀಲನೆ ನಡೆಸಿದ ನಂತರವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ನಾವು ಸಲ್ಲಿಸಿರುವ ದಾಖಲೆಗಳ ಆಧಾರದಲ್ಲೇ ಹೆಚ್ಚುವರಿ ಕಾರ್ಯಭಾರಕ್ಕೆ ನೇಮಕವಾಗಿರುತ್ತೇವೆ ಎಂದಿದ್ದಾರೆ.ಮಂಡ್ಯ ವಿವಿ ಕುಲಸಚಿವರು ಜನವರಿ 2ರಂದು ಲಿಖಿತ ಸಮಜಾಯಿಷಿ ಕೊಡುವಂತೆ ಪತ್ರ ನೀಡಿದಾಗ ಅದೇ ದಿನ 15 ದಿನಗಳ ಕಾಲಾವಕಾಶ ಕೇಳಿ 8 ದಿನದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನಾನು ಸಲ್ಲಿಸಿರುವ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕೃತವಾಗಿ ಮತ್ತೊಮ್ಮೆ ಸಲ್ಲಿಸಿದ್ದೇನೆ. ಆದರೂ ನನ್ನ ವಿರುದ್ಧ ಉನ್ನತ ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ಆಶ್ಚರ್ಯ ಆಘಾತ ಉಂಟುಮಾಡಿದೆ. ಇದೇ ವಿಚಾರವಾಗಿ ಕೆಲವು ವ್ಯಕ್ತಿಗಳು ನನಗೆ 3 ಲಕ್ಷ ರು. ಹಣದ ಬೇಡಿಕೆ ಇಟ್ಟಿದ್ದರು. ಅದಕ್ಕೆ ನಾನು ಒಪ್ಪದಿದ್ದಾಗ ನನ್ನನ್ನು ತೇಜೋವಧೆ ಮಾಡಲು ಸುಳ್ಳು ದೂರು ನೀಡುತ್ತಾ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.