ಹೆಗಡೆ ಹೆಸರು ಶಾಶ್ವತಗೊಳಿಸಲು ಹಲವು ಯೋಜನೆ: ಸಿಎಂ

KannadaprabhaNewsNetwork |  
Published : Aug 30, 2026, 01:30 AM IST
Ramakrishna Hegde 13 | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸಲು ಕಾರವಾರ ಮೆಡಿಕಲ್‌ ಕಾಲೇಜು, ಬಿಡಿಎ ನಿರ್ಮಾಣದ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಅವರ ಹೆಸರು ನಾಮಕರಣ ಮತ್ತು ಪಂಚಾಯ್ತಿಗಳಿಗೆ ಹೆಗಡೆ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸಲು ಕಾರವಾರ ಮೆಡಿಕಲ್‌ ಕಾಲೇಜು, ಬಿಡಿಎ ನಿರ್ಮಾಣದ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಅವರ ಹೆಸರು ನಾಮಕರಣ ಮತ್ತು ಪಂಚಾಯ್ತಿಗಳಿಗೆ ಹೆಗಡೆ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ಗ್ರಾಮೀಣ ಆಡಳಿತಕ್ಕೆ ಹೆಗಡೆ ನೀಡಿದ ಕೊಡುಗೆ ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅವರ ಜನ್ಮದಿನದಂದು ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡುವ ಕಾರ್ಯಕ್ರಮ ರೂಪಿಸುವಂತೆ ಆರ್‌ಡಿಪಿಆರ್ ಸಚಿವರೊಂದಿಗೆ ಚರ್ಚಿಸಲಾಗಿದೆ. ಜೊತೆಗೆ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕನಲ್ಲ; ಪಂಚಾಯತ್‌ನಿಂದ ಸಂಸತ್ತಿನವರೆಗೆ ಹೊಸ ನಾಯಕತ್ವ ಸೃಷ್ಟಿಸಿದ ನಾಯಕ. ಒಬ್ಬ ನಾಯಕನ ಕೆಲಸ ಕೇವಲ ಹಿಂಬಾಲಕರನ್ನು ಸೃಷ್ಟಿಸುವುದಲ್ಲ. ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ. ರಾಮಕೃಷ್ಣ ಹೆಗಡೆ ಅವರ ಮೂಲ ತತ್ವ ಇದೇ ಆಗಿತ್ತು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆ ಪ್ರೇರಣೆಯಾಯಿತು ಎಂದು ಹೇಳಿದರು.

ನಮ್ಮ ಸರ್ಕಾರ ರಾಮಕೃಷ್ಣ ಹೆಗಡೆ ಅವರ ಆಚಾರ-ವಿಚಾರ, ಮೌಲ್ಯಾಧಾರಿತ ರಾಜಕಾರಣ, ಪಂಚಾಯತ್ ರಾಜ್ ಮತ್ತು ಅಭಿವೃದ್ಧಿ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ. ಸಿದ್ದರಾಮಯ್ಯ, ದೇಶಪಾಂಡೆ, ರಾಯರೆಡ್ಡಿ, ಬಿ.ಎಲ್. ಶಂಕರ್ ಸೇರಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಹೆಗಡೆ ಅವರ ಆದರ್ಶ ಬದುಕಿನ ಆಚಾರ– ವಿಚಾರಗಳನ್ನು ಪಾಲಿಸಿಕೊಂಡು ಸಾಗುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ಹಣ ವಾಪಾಸ್‌ವರೆಗೂ ಹೋರಾಟ: ಬಿವೈವಿ
ಮುಂದಿನ ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ಡಾ। ಪರಂ