ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆ: ಸಂತೋಷ್‌ ಎಸ್. ಲಾಡ್

KannadaprabhaNewsNetwork |  
Published : Sep 18, 2025, 01:10 AM IST
ಚಿತ್ರ : 17ಎಂಡಿಕೆ1 : ಅಸಂಘಟಿತ ಕಾರ್ಮಿಕರಿಗೆ  ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್  ಸ್ಮಾರ್ಟ್ ಕಾರ್ಡ್ ವಿತರಿಸಿದರು.  | Kannada Prabha

ಸಾರಾಂಶ

ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಹಲವು ಯೋಜನೆ ಜಾರಿಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌. ಲಾಡ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಹಲವು ಯೋಜನೆ ಜಾರಿಗೊಳಿಸಿದ್ದು, ಆ ದಿಸೆಯಲ್ಲಿ ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸುವಂತೆ ಕಾರ್ಮಿಕ ಸಚಿವರಾದ ಸಂತೋಷ್‌ ಎಸ್. ಲಾಡ್ ಅವರು ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಮಂಡಳಿಯ ವಿವಿಧ ಯೋಜನೆಗಳ ಕುರಿತು ಬುಧವಾರ ನಡೆದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಕಾರ್ಮಿಕ ಇಲಾಖೆಯಲ್ಲಿ 26 ರಿಂದ 101 ರೀತಿಯ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಇವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಂತೋಷ್ ಎಸ್.ಲಾಡ್ ಅವರು ಕೋರಿದರು. ಸರ್ಕಾರ ಪ್ರಮುಖವಾಗಿ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಿರುವುದು ಇಡೀ ದೇಶದಲ್ಲಿ ವಿಶೇಷವಾಗಿದೆ ಎಂದರು. ಸ್ವಿಗ್ಗಿ, ಜೊಮೆಟೋಗಳಂತ ಸಂಸ್ಥೆಯಲ್ಲಿ ಆಹಾರ ಸರಬರಾಜು ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್ ಕಾರ್ಡ್, ಪೋರ್ಟಲ್, ಫಾರ್ಮಸಿ, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಡೊಮಿನೋಜ್ ಮತ್ತಿತರ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತರು ಗಿಗ್ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.

ಸೂಕ್ತ ಭದ್ರತೆ ಸರ್ಕಾರದ ಉದ್ದೇಶ: ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಕಲೆ, ಹೀಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

5 ಲಕ್ಷ ರು. ವರೆಗೂ ಪರಿಹಾರ: ಹಾಗೆಯೇ ಆಟೋ ರಿಕ್ಷಾ ಚಾಲಕರು ಪೇಯಿಂಟಿಂಗ್ ಮಾಡುವವರು ಸೇರಿದಂತೆ ಹಲವರಿಗೆ ಕಾರ್ಮಿಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮೃತರಾದಲ್ಲಿ 5 ಲಕ್ಷ ರು. ವರೆಗೂ ಪರಿಹಾರ ವಿತರಿಸಲಾಗುತ್ತದೆ ಎಂದು ಕಾರ್ಮಿಕ ಸಚಿವರು ತಿಳಿಸಿದರು. ರಾಷ್ಟ್ರದಲ್ಲಿ ಶೇ.90 ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಸಣ್ಣ ಸಣ್ಣ ಕಸುಬು ಮಾಡುತ್ತಿದ್ದಾರೆ. ಅಂತಹ 101 ವೃತ್ತಿಯನ್ನು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.

ಯುಪಿಎ ಸರ್ಕಾರ ಇದ್ದ ಅವಧಿಯಲ್ಲಿ ಸಾಲ ಎಷ್ಟು ಇತ್ತು, ಈಗ ಕಳೆದ 11 ವರ್ಷದಲ್ಲಿ ಸಾಲದ ಬಗ್ಗೆ ಅವಲೋಕನ ಮಾಡಬೇಕು ಎಂದರು.ದೇಶದಲ್ಲಿ ಶೇ.5 ರಷ್ಟು ಮಾತ್ರ ಜಿಡಿಪಿ ಇದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ 2.2 ಲಕ್ಷ ಆದಾಯವಿದ್ದು, ದೇಶದಲ್ಲಿ 1.5 ಲಕ್ಷ ಕ್ಕಿಂತಲೂ ಕಡಿಮೆ ಆದಾಯ ಇದೆ. ಆದ್ದರಿಂದ ದೇಶದ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆ ಬಗ್ಗೆ ವಿಮರ್ಶಿಸಬೇಕು ಎಂದು ಸಲಹೆ ಮಾಡಿದರು.ಹಿಂದಿನ ಯುಪಿಎ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ನರೇಗಾ ಕಾರ್ಯಕ್ರಮ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಒತ್ತಿ ಹೇಳಿದರು. ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂರು ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಅವರು ಹಾಗೂ ವಸತಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಸಂತೋಷ್ ಲಾಡ್ ಅವರು ಹೇಳಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಆಶಾದೀಪ ಯೋಜನೆ ಜಾರಿಗೊಳಿಸಿದೆ. ಶೋಷಿತರ ಪರವಾಗಿ ಸರ್ಕಾರ ಮತ್ತು ಸಚಿವರು ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವು ಯೋಜನೆ ಜಾರಿ: ಅಸಂಘಟಿತ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರ ಸಮಾಜ ಕಲ್ಯಾಣ ಜೊತೆಗೆ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ 101 ರೀತಿಯ ವಿವಿಧ ಅಸಂಘಟಿತ ಕಾರ್ಮಿಕರು ವಿಶೇಷವಾದ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದು, ತೋಟಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಸೂರು ಒದಗಿಸಬೇಕು ಎಂದು ಕೋರಿದರು. ಅಸಂಘಟಿತ ಕಾರ್ಮಿಕರು ಭೂಮಿ ಹಾಗೂ ನಿವೇಶನ ಇಲ್ಲದೆ 60 ವರ್ಷಗಳವರೆಗೆ ತೋಟಗಳಲ್ಲಿ ದುಡಿಯುತ್ತಾರೆ. ಇವರಿಗೆ ನೆಲೆ ಕಲ್ಪಿಸುವಂತಾಗಬೇಕು ಎಂದರು. ಗ್ಯಾರಂಟಿ ಯೋಜನಾ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಮಹರೂಸ್ ಖಾನ್ ಮಾತನಾಡಿ, ಬಡವರು ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು. ರಾಷ್ಟ್ರದಲ್ಲಿ ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಜಿಡಿಪಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಗೃಹಲಕ್ಷ್ಮಿ, ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಯಿಂದ ಇಡೀ ದೇಶದಲ್ಲಿಯೇ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು. ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿಯಾದ ಡಾ.ಎಸ್.ಬಿ.ರವಿಕುಮಾರ ಮಾತನಾಡಿ, ಅಸಂಘಟಿತ ಕಾರ್ಮಿಕರಿಗಾಗಿ 25 ಕ್ಕೂ ಹೆಚ್ಚು ಕಾರ್ಮಿಕ ಕಾಯ್ದೆಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಕುಟುಂಬದವರಿಗೆ 5 ಲಕ್ಷ ರು. ಚೆಕ್ ಅನ್ನು ಸಚಿವರು ವಿತರಿಸಿದರು. ಈ ಸಂದರ್ಭದಲ್ಲಿ ಗೌರಮ್ಮ ಅವರು ಭಾವುಕರಾದರು. ಜೊತೆಗೆ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಮಕ್ಕಳಿಗೆ 10 ಸಾವಿರ ರು..ಗಳ ಶೈಕ್ಷಣಿಕ ಸಹಾಯಧನ ವಿತರಿಸಲಾಯಿತು. ನೋಂದಾಯಿತ 94 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಅನ್ನು ಇದೇ ಸಂದರ್ಭದಲ್ಲಿ ಸಚಿವರು ವಿತರಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಮುಂಡರಗಿ ನಾಗರಾಜ್, ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ಎಸ್.ಶಶಿಧರ ಇತರರು ಇದ್ದರು. ಕಾರ್ಮಿಕ ಇಲಾಖೆಯ ಉತ್ತಪ್ಪ, ಕಾರ್ಮಿಕ ಇಲಾಖೆ ಆಯುಕ್ತರಾದ ಡಾ.ಎನ್.ಗೋಪಾಲಕೃಷ್ಣ ಅವರು ಭಾರತ ಸಂವಿಧಾನ ಪೀಠಿಕೆ ಓದಿದರು. ಗಿರೀಶ್ ನಾಡಗೀತೆ ಹಾಡಿದರು. ಉಪ ಕಾರ್ಮಿಕ ಆಯುಕ್ತರಾದ ಎಚ್.ಎಲ್.ಗುರುಪ್ರಸಾದ್ ಸ್ವಾಗತಿಸಿದರು. ಸಹಾಯಕ ಕಾರ್ಮಿಕ ಆಯುಕ್ತರಾದ ನಾಜಿಯಾ ಸುಲ್ತಾನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌