ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆ ಯಜಮಾನಿಗೆ ವಾರ್ಷಿಕ ₹1ಲಕ್ಷ

KannadaprabhaNewsNetwork | Published : Apr 25, 2024 1:01 AM

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಹೇಳಿದರು‌.

- ಸೈದರ ಕಲ್ಲಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ವಾರ್ಷಿಕ ₹1 ಲಕ್ಷ, ರೈತರ ಸಾಲ ಮನ್ನಾ, ವಿದ್ಯಾವಂತ ಯುವಕರಿಗೆ ವಾರ್ಷಿಕ ಒಂದು ಲಕ್ಷ ಪ್ರೋತ್ಸಾಹ ಹಣದ ಜೊತೆಗೆ ಉಚಿತ ತರಬೇತಿ ಸೇರಿದಂತೆ ಇನ್ನೂ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಹೇಳಿದರು‌.

ತಾಲೂಕಿನ ಸಿದ್ಲೀಪುರ, ಸನ್ಯಾಸಿ ಕೊಡಮಗ್ಗಿ, ಮುಂಗೋಟೆ, ಆನವೇರಿ, ನಿಂಬೆಗೊಂದಿ, ಸೈದರ ಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಅಧಿಕಾರ ಕೈಲಿದ್ದಾಗ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತ ಧ್ವನಿ ಎತ್ತದ ಕೆಲವರು ನನ್ನ ಬಗ್ಗೆ ಟೀಕಿಸುತ್ತಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನದಲ್ಲಿ ಉತ್ತರ ನೀಡಲಾಗುತ್ತದೆ. ಅದಕ್ಕೆ, ಮತದಾರರು ನನಗೆ ಬೆಂಬಲ ನೀಡಬೇಕು ಎಂದರು.

ಎಲ್ಲಾ ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜನ ಸಾಮಾನ್ಯರಿಗೆ ಕಾರ್ಯಕರ್ತರು ತಲುಪಿಸುತ್ತಿದ್ದಾರೆ‌. ಇದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಬಿಜೆಪಿಯವರು ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ನೀರು, ಸೂರು, ವಿದ್ಯುತ್, ರಸ್ತೆಗಳನ್ನು, ಉದ್ಯೋಗ, ಶಾಲಾ-ಕಾಲೇಜುಗಳನ್ನು ನೀಡಿದ್ದೇ ಕಾಂಗ್ರೆಸ್ ಎನ್ನುವುದನ್ನು ಯಾರೂ ಮರೆತಿಲ್ಲ. ಸರ್ಕಾರದ ಖಜಾನೆ ಗ್ಯಾರಂಟಿಗಳಿಂದ ಖಾಲಿಯಾಗಿದೆ ಎನ್ನುವ ಬಿಜೆಪಿ ಪಕ್ಷದವರು ತಮ್ಮ ಅವಧಿಯಲ್ಲಿ ಯಾವ ಬಡಬನಿಗೂ ನೀಡದೆ, 40% ಕಮಿಷನ್ ತಿಂದಿದ್ದರ ಫಲವಾಗಿ ಈ ಬಾರಿ ರಾಜ್ಯದಲ್ಲಿ ಅಧಿಕಾರದಿಂದ ದೂರ ಸರಿಸಲ್ಪಟ್ಟಿದ್ದಾರೆ ಎಂದ ಅವರು, ಆದರೆ 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರಿಗೆ ಮತ ನೀಡಬೇಕು. ಇಲ್ಲಿ, ಕ್ಷೇತ್ರದ ಜನರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.

ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಎಚ್.ಎಲ್.ಷಡಾಕ್ಷರಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಿಜಯ್ ಕುಮಾರ್, ಶಾಂತಕುಮಾರ್ ನಾಯ್ಕ್, ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಟಿ.ನೇತ್ರಾವತಿ, ದೇವಿ ಕುಮಾರ್, ಕೆ.ಆರ್ ಶ್ರೀಧರ್, ಎನ್.ಟಿ.ಸಂಗನಾಥ್, ಎಸ್.ಪಿ.ಜಯದೇವಪ್ಪ, ಬಂಡೇರ ಚಂದ್ರಪ್ಪ, ಎ.ಎಮ್.ಮಲ್ಲಿಕಾರ್ಜುನ್, ಆರ್. ಉಮೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆದಿಚುಂಚನಗಿರಿ ಮಠಕ್ಕೆ ಗೀತಾ ಭೇಟಿ; ಶ್ರೀಗಳಿಂದ ಆಶೀರ್ವಾದಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಬುಧವಾರ ಇಲ್ಲಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಪೀಠದ ಪ್ರಸನ್ನನಾಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.ಜೊತೆಗೆ ಮಠದ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ಉಚಿತ ವಿವಾಹ ಹಾಗೂ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯರನ್ನು ಗೌರವಿಸುವ ಸಮಾರಂಭದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ನಡೆಸಲಾಗಿದೆ. ಇಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಜನರು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಭರವಸೆ ನೀಡಲಾಗಿದೆ. ಅದೇ ರೀತಿ ಮುಂದಿನ ದಿನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಂತದಲ್ಲಿ ಹರಿಹರಿಸಬಹುದಾದ ಸಮಸ್ಯೆಗಳಿಗೆ ಸ್ಪಂದಿಸು ವುದಾಗಿ ತಿಳಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅರ್.ಪ್ರಸನ್ನಕುಮಾರ್, ಸೂಡ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕಲಗೋಡು ರತ್ನಾಕರ, ಭೋವಿ ನಿಗಮ ಅಧ್ಯಕ್ಷ ರವಿಕುಮಾರ್, ರಮೇಶ್ ಹೆಗ್ಡೆ, ಟಿ.ನೇತ್ರಾವತಿ, ವೈ.ಎಚ್.ನಾಗರಾಜ ಸೇರಿ ಕಾರ್ಯಕರ್ತರು ಇದ್ದರು.

Share this article